ಪಾಂಡವಪುರ : ಸಾಲಬಾಧೆ ತಾಳಲಾರದೆ ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೋರ್ವ ಚಾಕುವಿನಿಂದ ತನ್ನ ಕುತ್ತಿಗೆ ಕೂಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದ್ದು, ಮಗನ ಸಾವಿನ ಸುದ್ದಿ ತಿಳಿದು ತಾಯಿ ಶಿವಮ್ಮ ಅವರಿಗೂ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಸತ್ಯ ಶಿವಮ್ಮ ದಂಪತಿಯ ಪುತ್ರ ಸತೀಶ್ (ತೇರಿ)(39) ಆತ್ಮಹತ್ಯೆ ಮಾಡಿಕೊಂಡವರು.
ಸತೀಶ್ ಹಲವಾರು ವರ್ಷಗಳಿಂದ ಸಾಲಮಾಡಿಕೊಂಡು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಾಲಗಾರರ ಕಾಟ ತಾಳಲಾರದೆ ಜೀವನದಲ್ಲಿ ಸಾಕಷ್ಟು ನೊಂದು ಜುಗುಪ್ಸೆಗೊಂಡಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ ತಮ್ಮ ಮನೆಯಲ್ಲಿಯೇ ಚಾಕುವಿನಿಂದ ಕುತ್ತಿಗೆ ಭಾಗವನ್ನು ಕೂಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ತಾಯಿ ಶಿವಮ್ಮ ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸತೀಶ್‌ನನ್ನು ತಕ್ಷಣ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ತಾಯಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರ ತಾಯಿ ಶಿವಮ್ಮ ಅವರ ಹೇಳಿಕೆ ಆಧರಿಸಿ ಪಾಂಡವಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಪಂಚನಾಮೆ ನಡೆಸಿ ಭಾನುವಾರ ಬೆಳಿಗ್ಗೆ ವಾರಸುದಾರರಿಗೆ ಹಸ್ತಾಂತರಿಸಿದರು. ಮಧ್ಯಾಹ್ನ ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.





