Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಡಿಸಿಎಂ ಮಂಡ್ಯ ಜಿಲ್ಲೆಯ ಜನರ ಕ್ಷಮೆ ಕೇಳಲೆಬೇಕು: ಚಂದ್ರಶೇಖರ್

ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದಿರುವುದು ಜಿಲ್ಲೆಯ ಜನತೆಗೆ ನೋವುಂಟು ಮಾಡಿದೆ. ಡಿಸಿಎಂ ಅವರು ಮಾರ್ಚ್ 24 ರೊಳಗೆ ಜನತೆಯ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿಯ ಸದಸ್ಯ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಪೂರ್ವದಿಂದಲೂ ಜಿಲ್ಲೆಯ ಜನರು ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಮುಖ ನೀರಾವರಿ ಚಳುವಳಿಗಳಲ್ಲಿ ಹಾಗೆಯೇ ರಾಷ್ಟ್ರ ರಾಜಕಾರಣದಲ್ಲೂ ಭಾಗವಹಿಸಿ ಹೆಸರು ಮಾಡಿದ್ದಾರೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರು ಈ ಬಗ್ಗೆ ಒಂದು ಮಾತನ್ನು ಆಡದಿರುವುದು ವಿಪರ್ಯಾಸ. ಶಿವಕುಮಾರ ಅವರಿಗೆ ಈ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನು ಸಹ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೋಮವಾರದೊಳಗೆ ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.

ಮಾರ್ಚ್ 25 ಕ್ಕೆ ಛತ್ರಿ ಮೆರವಣಿಗೆ

ಇದೇ ಮಾ.24 ರ ಸೋಮವಾರ ಸಂಜೆಯೊಳಗೆ ಕ್ಷಮಾಪಣೆ ಕೇಳದಿದ್ದರೆ ಮಾರ್ಚ್ 25ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್‌ವರೆಗೆ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳ ಮುಖಂಡರು ಛತ್ರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಳ್ಳಿ ಚಂದ್ರು, ಶಂಭೂನಹಳ್ಳಿ ಸುರೇಶ, ಬೋರಲಿಂಗೇಗೌಡ ಪಣಕನಹಳ್ಳಿ, ಹಲ್ಲೆಗೆರೆ ಶಿವರಾಂ, ಹೊಳಲು ಸಂತೋಷ್,ಇಂಡುವಾಳು ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!