Mysore
23
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮತ ಎಣಿಕೆ: ಲೋಪವಾಗದಂತೆ ಎಚ್ಚರವಹಿಸಲು ಜಿಲ್ಲಾ ಚುನಾವಣಾಧಿಕಾರಿ ಸೂಚನೆ

 ಮಂಡ್ಯ :  ಮಂಡ್ಯ  ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಮತ ಎಣಿಕೆ ಕಾರ್ಯವು ಮಂಡ್ಯ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಜೂನ್ 4 ರಂದು ನಡೆಯಲಿದೆ.  ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಗೆ ಕ್ರಮಗಳನ್ನು ವಹಿಸಬೇಕು ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಹೇಳಿದರು.

ಇಂದು(ಮೇ.೨೩) ನಗರದ ಅಂಬೇಡ್ಕರ್ ಭವನದಲ್ಲಿ ಲೋಕಸಭಾ  ಸಾರ್ವತ್ರಿಕ ಚುನಾವಣೆ 2024 ರ ಇವಿಎಂ ಮತ ಎಣಿಕೆ ಸಿಬ್ಬಂದಿಗಳಿಗೆ ಆಯೋಜಿಸಲಾದ ಚುನಾವಣಾ ತರಬೇತಿಯಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಮತದಾನ ಕಾರ್ಯಗಳಿಗೆ ಸಂಬಂಧಿಸಿದಂತೆ ನೇಮಕಗೊಂಡಿದ್ದ ಸೆಕ್ಟರ್ ಅಧಿಕಾರಿಗಳು, ಎಆರ್ ಒ ಗಳು, ಪಿಆರ್ ಒಗಳು, ಮಾಸ್ಟರ್ ಟ್ರೇನರ್ ಗಳನ್ನೇ ಮತ ಎಣಿಕೆ ಸಿಬ್ಬಂದಿಗಳಾಗಿ ನೇಮಕ ಮಾಡಲಾಗಿದೆ. ಎಲ್ಲಾ ಮತ ಎಣಿಕೆ ಸಿಬ್ಬಂದಿಗಳಿಗೂ ಇವಿಎಂ ಬಳಕೆಯ ಅನುಭವವಿರುವುದರಿಂದ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಮತ ಎಣಿಕೆಯ ದಿನ ಎಲ್ಲಾ ಸಿಬ್ಬಂದಿಗಳು ನಿಗದಿಪಡಿಸುವ ಸಮಯಕ್ಕೆ ಹಾಜರಿರಬೇಕು. ಮತ ಎಣಿಕೆ ಕೊಠಡಿಗೆ ಮೊಬೈಲ್ ಸಂಪೂರ್ಣವಾಗಿ ನಿಷೇಧಸಲಾಗಿದೆ. ಪ್ರತಿಯೊಂದು ಟೇಬಲ್ ಗಳ ಮೇಲೂ ಸಿ‌ಸಿ ಕ್ಯಾಮರಾ ಇದ್ದು, ಬಹಳ ಜಾಗರೂಕತೆಯಿಂದ ಮತ ಎಣಿಕೆ ನಡೆಸಿ ಎಂದರು.

ಮತ ಎಣಿಕೆಯ ಸಂದರ್ಭದಲ್ಲಿ ಇ.ವಿ.ಎಂ. ಗೆ ಸಂಬಂಧಿಸಿದಂತೆ ತಾಂತ್ರಿಕಾ ದೋಷ ಕಂಡು ಬಂದರೆ  ಅಥವಾ  ಕ್ಲೋಸ್ ಬಟನ್ ಉಪಯೋಗಿಸಿದರೂ ಕ್ಲೋಸ್ ಮಾಡದ ಪ್ರಕರಣ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ನಿರ್ದೇಶನದಂತೆ  ಕ್ರಮಗಳನ್ನು ಅನುಸರಿಸಬೇಕು. ಸಮಸ್ಯೆ ಎದುರಾದಾಗ  ಸಹಾಯಕ ಚುನಾವಣಾಧಿಕಾರಿಗಳ ಬಳಿ ಪರಿಹಾರ ಕೇಳಿದರಾಯಿತು ಎನ್ನುವ ಮನೋಭಾವ ಬೇಡ ಎಂದರು.

ಮತ ಎಣಿಕೆಗೆ ಸಂಬಂಧಿಸಿದಂತೆ ನಿಯೋಜಿಸಲಾಗುವ ಎಜೆಂಟ್ ಗಳ  ಬಳಿ ಶಾಂತವಾಗಿ ವರ್ತಿಸಿ, ಅವರಿಗೆ ಸಂಶಯಗಳಿದ್ದಲ್ಲಿ ಅವುಗಳನ್ನು ಪರಿಹರಿಸಿ ಎಂದು ಹೇಳಿದರು.

ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿಯು ಬಹಳ ಮುಖ್ಯವಾಗಿದ್ದು, ಮೇಲ್ವಿಚಾರಕರು ಪ್ರತಿ ಇ.ವಿ.ಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿಆಂಶಗಳನ್ನು ಬರೆದುಕೊಳ್ಳಬೇಕು. ಇದರಲ್ಲಿ ತಪ್ಪಾದರೆ ಎಣಿಕೆ ಕೆಲಸಗಳು ಕಷ್ಟಕರವಾಗುತ್ತದೆ. ಆದರಿಂದ ತರಬೇತಿಯ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಿರಿ. ಯಾವುದೇ ಗೊಂದಲವಿದ್ದರೂ ಇಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ನಿರ್ದೇಶಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎಚ್. ಎಲ್ ನಾಗರಾಜು, ಸಹಾಯಕ ಚುನಾವಣಾಧಿಕಾರಿ ಮಹೇಶ್, ಆನಂದ್ ಕುಮಾರ್ , ಕೃಷ್ಣ ಕುಮಾರ್, ಲೋಕನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!