ರೈತ ಸಂಘ, ಪ್ರಾಂತ ರೈತ ಸಂಘ, ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ
ಮಂಡ್ಯ : ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಹಾಗೂ ಭಾರತ ಬಿಟ್ಟು ತೊಲಗಿ ಚಳವಳಿಯ ೮೩ನೇ ವಾರ್ಷಿಕೋತ್ಸವದ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕದ ಸಹಯೋಗದಲ್ಲಿ ‘ಕಾರ್ಪೋರೇಟ್ ಮತ್ತು ಎಂಎನ್‌ಸಿ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ’ ಎಂದು ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು, ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪೆನಿಗಳು ಕೃಷಿಯೆಡೆಗೆ ಮುಂದಾಗಿವೆ. ಇದರಿಂದ ಕೃಷಿ ಮತ್ತು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನರ ಬದುಕಿಗೆ ಮಾರವಾಗಿದೆ. ಆದ್ದರಿಂದ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪೆನಿಗಳನ್ನು ದೇಶದಿಂದ ಹೊರ ಹಾಕಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಭಾರತ ಬಿಟ್ಟು ತೊಲಗಿ ಹೋರಾಟ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪೆನಿಗಳನ್ನು ದೇಶದಿಂದ ಹೊರಗೆ ದೂಡಬೇಕೆಂದು ಆಗ್ರಹಿಸಿದರು.
ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪೆನಿಗಳು ದೇಶದ ಆರ್ಥಿಕತೆಯನ್ನು ಖಾಸಗೀಕರಣಗೊಳಿಸುತ್ತಿವೆ. ಇದರೊಂದಿಗೆ ಎಲ್ಲ ಕೇತ್ರಕ್ಕೂ ಲಗ್ಗೆ ಹಾಕುತ್ತಿವೆ. ಇದರಿಂದ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮತ್ವಕ್ಕೆ ತೊಂದರೆಯುಂಟಾಗಲಿದೆ. ಆದ್ದರಿಂದ ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನ ಸಂಘಟನೆಗಳು ಒಟ್ಟಾಗಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ನೀತಿಯ ವಿರುದ್ಧ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅಮೆರಿಕಾದೊಂದಿಗೆ ಆರ್ಥಿಕ, ವಾಣಿಜ್ಯ, ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು, ವಿದೇಶಿ ನೇರ ಹೂಡಿಕೆಗೆ ಕಡಿವಾಣ ಹಾಕಬೇಕು. ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿ ರದ್ದುಪಡಿಸಬೇಕು. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೂಲಕ ಖಾಸಗಿ ಬಂಡವಾಳ ಉತ್ತೇಜಿಸುವ ನೀತಿ ಕೈಬಿಡಬೇಕು. ಎಲ್ಲ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಸಮಗ್ರ ಸಾಲ ಮನ್ನಾ ನೀತಿ ಜಾರಿಯಾಗಬೇಕು. ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಸೇರಿದಂತೆ ೧೧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮೇಶ್, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಹ ಕಾರ್ಯದರ್ಶಿ ಪ್ರೇಮಾ ಇತರರು ಭಾಗವಹಿಸಿದ್ದರು.





