ಮಂಡ್ಯ: ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎಂಬ ತಾರತಮ್ಯವಿಲ್ಲದೆ ಜನಸಮಾನ್ಯರಿಗೆ ಸಮಾನವಾಗಿ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 35000 ಕೋಟಿ 5 ಗ್ಯಾರಂಟಿ ಯೋಜನೆಗಳ ಮೂಲಕ ಒಂದಲ್ಲ ಒಂದು ರೀತಿ ಎಲ್ಲರಿಗೂ ತಲುಪಿಸಲಾಗಿದೆ. ಪ್ರತಿ ಕುಟುಂಬಕ್ಕೆ ಪ್ರತಿ ಮಾಹೆ ಅಂದಾಜು 5000 ರೂ ಸೌಲಭ್ಯ ದೊರಕಿಸಲಾಗುತ್ತಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56000 ಕೋಟಿ ರೂ ಹಣವನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ ಎಂದರು.
ನಾಗಮಂಗಲ ತಾಲೂಕಿನಲ್ಲಿ 35 ವರ್ಷಗಳಿಂದಲೂ ಇದ್ದ ಸಮಸ್ಯೆಯನ್ನು ಪರಿಹರಿಸಿ ಹಕ್ಕಿಪಿಕ್ಕಿ ಜನಾಂಗದವರಿಗೆ ಇಂದು ಹಕ್ಕು ಪತ್ರವನ್ನು ನೀಡಿಲಾಯಿತು ಎಂದರು
ಕೃಷಿ ಇಲಾಖೆಯಿಂದ ರಾಜ್ಯದಲ್ಲಿ ಸುಮಾರು 15 ರಿಂದ 20 ಲಕ್ಷ ರೈತರಿಗೆ ಬೆಳೆ ವಿಮೆ ಸೇರಿದಂತೆ ವಿವಿಧ ಯೋಜನೆಯಡಿ 2500 ಕೋಟಿ ರೂ ಹಣವನ್ನು ನೀಡಲಾಗಿದೆ ಎಂದರು.
ಕೃಷಿ ಇಲಾಖೆಯಲ್ಲಿ ಈ ಮೊದಲು ಕಳಪೆ ಬೀಜ, ಗೊಬ್ಬರ ಸರಿಯಾದ ರೀತಿ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿತ್ತು. ಕೃಷಿ ಸಚಿವನಾಗಿ ಇವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಯಾವುದೇ ದೂರುಗಳು ಬಾರದಂತೆ ರೈತರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ಜಯಚಾಮರಾಜೇಂದ್ರ ಒಡೆಯರ್ ರವರು ನೀಡಿದ್ದು, ಅವರನ್ನು ಬಿಟ್ಟರೆ 70 ವರ್ಷಗಳ ನಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಿಲ್ಲೆಯ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.
ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿಯೇ ಮೆಡಿಕಲ್ ಕಾಲೇಜು, ಕೆ ಎಸ್ ಆರ್ ಟಿ ಸಿ ಡಿವಿಸನ್, ಆರ್ ಟಿ ಓ ಆಫೀಸ್, ಪೊಲೀಸ್ ಸ್ಟೇಷನ್, ಮಿನಿ ವಿಧಾನಸೌಧವನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಫ್ಯಾಕ್ಟರಿಯನ್ನು ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಜಿಲ್ಲೆಯ ಮುಖಂಡರು, ಶಾಸಕರು, ಅಭಿವೃದ್ಧಿಯ ಕಾರ್ಯಗಳು ಶೀಘ್ರವಾಗಿ ಪೂರ್ಣಗೊಳಿಸಲು ಕೈಜೋಡಿಸಬೇಕು ಎಂದರು.
ಜಿಲ್ಲಾ ಸಚಿವನಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕುಂದು ಕೊರತೆಗಳಿಗೆ ಸ್ಪಂದಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಬೆಳೆ ವಿಮೆ ಈ ವರ್ಷ 25 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು ಮಾರ್ಚಿ ಅಂತ್ಯದೊಳಗೆ ಒಟ್ಟಾರೆ 13 ಲಕ್ಷ ರೈತರಿಗೆ ರೂ.1400ಕೋಟಿಗಳ ವಿಮೆ ಹಣ ಪಾವತಿಯಾಗಲಿದೆ ಈಗಾಗಲೇ 8 ಲಕ್ಷ ರೈತರಿಗೆ ರೂ.600 ಕೋಟಿಗಳ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ ಅನುದಾನವು ಮಾರ್ಚ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಏಳುವರೆ ಸಾವಿರ ಕೃಷಿ ಹೋಂಡಾ ಗಳನ್ನು ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು ಎಂದರು.