ಮಂಡ್ಯ: ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತರ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುವ ಮೂಲಕ ರೈತರ ಮಿತ್ರನಂತೆ ಸಹಕಾರ ಸಂಘಗಳನ್ನು ಮುನ್ನಡೆಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಹೇಳಿದರು.
ಅವರು ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 75ನೇ ವರ್ಷದ ವಜ್ರಮಹೋತ್ಸವ ಹಾಗೂ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸೇರಿದಂತೆ ಭಾರತ ದೇಶಾದ್ಯಂತ ಸಹಕಾರ ಚಳುವಳಿಯು ವಿಸ್ತರಿಸಿದೆ. ರೈತರ ಬಂಧುವಿನಂತೆ, ರೈತರ ಮಿತ್ರನಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರಗಳು ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಸಕಾಲಕ್ಕೆ ನೀಡಿ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕರಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ರೈತನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರಬರಾಜು ಮಾಡುವ ಪ್ರತೀ ಲೀಟರ್ ಹಾಲಿಗೆ 5 ರೂ ಸಹಾಯ ಧನವನ್ನು ನೀಡುವ ಜೊತೆಗೆ 5ಲಕ್ಷ ರೂಪಾಯಿಗಳವರೆಗೆ ರೈತರು ಬೇಸಾಯ ನಡೆಸಲು ಶೂನ್ಯ ಬಡ್ಡಿಯಲ್ಲಿ ಬಡ್ಡಿ ರಹಿತವಾದ ಸಾಲ ಸೌಲಭ್ಯವನ್ನು ನೀಡಿ ರೈತರಿಗೆ ಆಸರೆಯಾಗುವ ಜೊತೆ ಜೊತೆಗೆ ಕೃಷಿ ಚಟುವಟಿಕೆ ನಡೆಸಲು ಬೇಕಾದ ಮಾರ್ಗದರ್ಶನ ಹಾಗೂ ಉತ್ತೇಜನ ನೀಡಿ ರೈತರು ನೆಮ್ಮದಿಯಾಗಿ ಬೇಸಾಯ ನಡೆಸಿ ಆರ್ಥಿಕವಾಗಿ ಸ್ವಾವಲಂಭನೆ ಸಾಧಿಸಿ ಸಾಲದ ಬಾಧೆಯಿಂದ ಹೊರಬರಲು ಸದೃಡವಾಗಿ ನಿಂತು ಸಹಕಾರ ಹಸ್ತವನ್ನು ಚಾಚಿದೆ. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಡ್ಯ ಜಿಲ್ಲೆಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1038 ಕೋಟಿ ರೂಪಾಯಿ ಸಾಲ ಸೌಲಭ್ಯವನ್ನು ನೀಡಿದೆ ಎಂದು ಅಭಿಮಾನದಿಂದ ಹೇಳಿದರು.
ರಾಜ್ಯದಲ್ಲಿ ಈ ಭಾರಿ ಉತ್ತಮವಾದ ಮಳೆಯಾಗಿದ್ದು ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಉತ್ತಮವಾದ ಮಳೆಯಾಗಿ ಕೆರೆ-ಕಟ್ಟೆಗಳು ಹಾಗೂ ಜಲಾಶಯಗಳು ತುಂಬಿ ತುಳುಕುತ್ತಿದ್ದು ಸಮೃದ್ಧವಾದ ಫಸಲು ಬೆಳೆದು ಉತ್ತಮವಾಗಿ ಇಳುವರಿ ಪಡೆದಿರುವ ರೈತರು ಬೇಸಾಯ ಚಟುವಟಿಕೆಯನ್ನು ನಡೆಸಲು ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು ಹಾಗೂ ರಸ ಗೊಬ್ಬರವನ್ನು ಸರಬರಾಜು ಮಾಡಿಸಿ ರಾಜ್ಯದ ಕೃಷಿ ಸಚಿವನಾಗಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡಿರುವ ಆತ್ಮವಿಶ್ವಾಸ ನನಗೆ ಇದೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ಶಾಸಕ ಮಂಜು ವಹಿಸಿದ್ದರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ, ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಆರ್.ನವೀನ್‌ಕುಮಾರ್, ಮೈಸೂರು ಮಹರಾಣಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸುರೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮೈಷುಗರ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯರಾದ ಕೊಡಗಹಳ್ಳಿ ಮಂಜೇಗೌಡ, ಬಿ.ನಾಗೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಡಿಸಿಸಿ ಬ್ಯಾಂಕ್ ಪ್ರಧಾನವ್ಯವಸ್ಥಾಪಕಿ ಆರ್.ಜೆ.ರೂಪಶ್ರೀ, ಶಶಿಧರ್ ಸಂಗಾಪುರ, ರಾಜನಾಯಕ, ಎ.ಎಂ.ಸಂಜೀವಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಪ್ರಮೋಧ, ಮೇಲ್ವಿಚಾರಕ ಆದಿಲ್‌ಪಾಶ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





