Mysore
25
clear sky

Social Media

ಗುರುವಾರ, 29 ಜನವರಿ 2026
Light
Dark

ಬೈಕ್‌ನಿಂದ ಬಿದ್ದು ಮಗು ಸಾವು ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಉದಯ್

consoled

ಮದ್ದೂರು : ಬೀದಿ ನಾಯಿ ದಾಳಿ ವೇಳೆ ಗಾಯಗೊಂಡು ಚಿಕಿತ್ಸೆಗೆಂದು ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಂಚಾರಿ ಪೋಲೀಸರ ವಾಹನ ತಪಾಸಣೆ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ರಿತೀಕ್ಷಾ ನಿವಾಸಕ್ಕೆ ಬುಧವಾರ ಶಾಸಕ ಕೆ.ಎಂ.ಉದಯ ಭೇಟಿ ನೀಡಿ ಪೋಷಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಾಲ್ಲೂಕಿನ ಗೊರವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಂ.ಉದಯ ಮೃತರ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಬಳಿಕ ತಪ್ಪಿತಸ್ಥರ ವಿರುದ್ಧ ಅಗತ್ಯ ಶಿಸ್ತು ಕ್ರಮದ ಭರವಸೆ ನೀಡುವ ಜೊತೆಗೆ ವೈಯಕ್ತಿಕ ಪರಿಹಾರ ನೀಡಿದರು.

ಮೃತಳ ತಾತ ಹಾಗೂ ತಂದೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರಲ್ಲದೆ ನಾಯಿ ಕಡಿತದಿಂದ ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ತೆರಳಿದ್ದ ವೇಳೆ ಕರ್ತವ್ಯ ನಿರತ ವೈದ್ಯರು ಕೇವಲ ಚುಚ್ಚುಮದ್ದನ್ನು ನೀಡಿ ಬಳಿಕ ಸಮರ್ಪಕವಾಗಿ ಚಿಕಿತ್ಸೆ ನೀಡದೆ ಮಂಡ್ಯಕ್ಕೆ ತೆರಳುವಂತೆ ಸೂಚನೆ ನೀಡುವ ಜತೆಗೆ ಯಾವುದೇ ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆಯನ್ನು ಕಲ್ಪಿಸದಿರುವ ಬಗ್ಗೆ ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು.

ತಾಲ್ಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಕರ್ತವ್ಯನಿರತ ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ತಾವುಗಳು ಇದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಮುಂದೆ ಇಂತಹ ಪ್ರಕರಣಗಳು ಜರುಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.

ಬಳಿಕ ಶಾಸಕ ಕೆ.ಎಂ.ಉದಯ, ನಡೆದ ಘಟನೆ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ದಕ್ಷಿಣ ವಲಯ ಐ.ಜಿ.ಪಿ ಬೋರಲಿಂಗಯ್ಯರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ಹೇಳಿದರು.

Tags:
error: Content is protected !!