ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ ಮಗು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮದ್ದೂರಿನ ಗೊರವನಹಳ್ಳಿಯಲ್ಲಿ ಮೃತ ಹೃತೀಕ್ಷಾ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸಬೇಕು. ಪ್ರಕರಣ ಸಂಬಂಧ ಮುನ್ನೆಚ್ಚರಿಕೆಯಾಗಿ ಮೂರು ಜನ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಐಜಿ, ಎಸ್ಪಿ ಜೊತೆ ಮಾತನಾಡಿದ್ದೇನೆ. ತನಿಖೆ ಮಾಡಿಸಿ ಮುಂದಿನ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ. ಪೋಷಕರ ಕಣ್ಣೀರು ಎಲ್ಲರಿಗೂ ದುಃಖ ಬರುತ್ತೆ. ಕಣ್ಣ ಮುಂದೆ ಮಗುವನ್ನು ಬದುಕಿಸಿಕೊಳ್ಳಲು ಆಗಿಲ್ಲ. ಇದರಲ್ಲಿ ಡಾಕ್ಟರ್‌ಗಳದ್ದೂ ತಪ್ಪಿದೆ. ಡಿಸಿ, ಸಿಇಓ, ಎಸ್ಪಿ ಜೊತೆ ಸಭೆ ಮಾಡಿ ಪೊಲೀಸರ ನಿರ್ಲಕ್ಷ್ಯತೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಪೋಷಕರಿಗೆ ಹಣ ಮುಖ್ಯವಲ್ಲ. ಈಗ ಅವರು ಮಗು ಕಳೆದುಕೊಂಡ ಸಂಕಟದಲ್ಲಿದ್ದಾರೆ. ಸಿಎಂ ಪರಿಹಾರ ನಿಧಿ ಬರೆಯಲು ಹೇಳಿದ್ದೇನೆ ಎಂದರು. ಪೊಲೀಸರಿಂದ ಪರಿಶೀಲನೆ ಆಗೋದು ಸಹಜ. ಎಲ್ಲರೂ ಹೆಲ್ಮೆಟ್ ಹಾಕಬೇಕು, ಪೊಲೀಸರು ಕೂಡ ನೋಡಿಕೊಂಡು ವರ್ತಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು. ತಪ್ಪು ಮಾಡಿರುವವರ ವಿರುದ್ಧ ಕಠಿಣ ಕ್ರಮ ಪಕ್ಕಾ ಎಂದು ಕಿಡಿಕಾರಿದರು.





