Mysore
20
overcast clouds
Light
Dark

ಕೆಆರ್‌ಎಸ್‌ ಬಹುತೇಕ ಭರ್ತಿ: ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂದ ಉಸ್ತುವಾರಿ ಸಚಿವ

ಮಂಡ್ಯ: ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ನಾಗಮಂಗಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಕೆ ಆರ್ ಎಸ್ ಅಣೆಕಟ್ಟಿನ ನೀರಿನ ಮಟ್ಟವು 120 ಅಡಿ ದಾಟಿದೆ. ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಹೇಮಾವತಿ ಜಲಾಶಯವೂ ಭರ್ತಿಯಾಗಿರುವುದರಿಂದ ಹೆಚ್ಚುವರಿ 20,000 ಕ್ಯೂಸೆಕ್ ನೀರು ಕೆ ಆರ್ ಎಸ್ ಅಣೆಕಟ್ಟಿಗೆ ಬರುತ್ತಿದೆ. ಕಬಿನಿಯಿಂದ 60,000 ದಿಂದ 70,000 ಕ್ಯೂಸೆಕ್ ನೀರು ಬರುತ್ತಿದೆ. ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಕೆ.ಆ‌ರ್.ಎಸ್ ನಿಂದ ಒಂದು ಲಕ್ಷ ಕ್ಯೂಸೆಕ್ ವರೆಗೂ ನೀರನ್ನು ಬಿಟ್ಟರೆ ಯಾವುದೇ ತೊಂದರೆಯಾಗಲ್ಲ, ಒಂದು ಲಕ್ಷ ಕ್ಯೂಸೆಕ್ಸ್ ಗಿಂತ ಹೆಚ್ಚಿನ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನದಿ ಪಾತ್ರದಲ್ಲಿರುವ ಜಿಲ್ಲೆಯ ಒಟ್ಟು 92 ಗ್ರಾಮಗಳಿಗೆ ಸಮಸ್ಯೆಯಾಗಬಹುದು. ಶ್ರೀರಂಗಪಟ್ಟಣ ತಾಲ್ಲೂಕು – 53, ಪಾಂಡವಪುರ- 15, ಮಳವಳ್ಳಿ- 21 ಹಾಗೂ ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆ.ಆ‌ರ್.ಪೇಟೆ – 3 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿಶೇಷ ಕಾಳಜಿ ವಹಿಸಬೇಕು ಎಂದರು.

ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಕೆ ಆರ್ ಎಸ್ ನಿಂದ ನಾಲೆಗಳಿಗೆ 1961-62 ನೇ ಸಾಲಿನಲ್ಲಿ 2,13,000 ಕ್ಯೂಸೆಕ್, 1991-92 ನೇ ಸಾಲಿನಲ್ಲಿ 2,11,000 ಕ್ಯೂಸೆಕ್, 2019-20 ನೇ ಸಾಲಿನಲ್ಲಿ 1, 51,000 ಕ್ಯೂಸೆಕ್, 2020-21 ನೇ ಸಾಲಿನಲ್ಲಿ 73,000 ಕ್ಯೂಸೆಕ್ಸ್ ನೀರು ಬಿಡುಗಡರ ಮಾಡಿದ ಸಂದರ್ಭದಲ್ಲಿ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ತೊಂದರೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಮಳೆ ಹಾಗೂ ಪ್ರವಾಹದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ಇಒ, ಗ್ರಾಮ ಪಂಚಾಯಿತಿಯ ಪಿಡಿಒ ಗಳಿಗೆ ತಿಳಿಸಲಾಗಿದೆ. ಶ್ರೀರಂಗಪಟ್ಟಣದ ದೇವಸ್ಥಾನಗಳಿಗೆ ಪ್ರವಾಸಿಗರು ಬರುವುದರಿಂದ ಮುನ್ನೆಚ್ಚರಿಕೆಯಾಗಿ ಹೊಳೆಗಳ ಹತ್ತಿರ ಎಚ್ಚರಿಕೆ ಸೂಚನಾ ಫಲಕಗಳು ಹಾಗೂ ಬ್ಯಾರಿಕೇಡ್ ಅನ್ನು ಅಳವಡಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿರುವ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು.
ಈಗಾಗಲೇ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜವನ್ನು ವಿತರಿಸಲು ಸೂಚನೆ ನೀಡಲಾಗಿದ್ದು, ರೈತರಿಗೆ ಯಾವುದೇ ತೊಂದರೆಯಾಗಲ್ಲ ಎಂದರು.