ಮದ್ದೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿ ತೆರಳುತ್ತಿದ್ದ ಓರ್ವ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಪಟ್ಟಣದ ಶಿವಪುರದ ಸತ್ಯಾಗ್ರಹ ಸೌಧದ ಬಳಿ ಸಂಭವಿಸಿದೆ.
ತಾಲ್ಲೂಕಿನ ಕದಲೂರು ಗ್ರಾಮದ ಬಾಲುಗೌಡ(24) ಮೃತಪಟ್ಟವರು. ಇವರು ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದರು. ಬೈಕ್ ಸವಾರ ಜೀವನ್‌ಗೌಡ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲುಗೌಡ ಹಾಗೂ ಜೀವನಗೌಡ ಇಬ್ಬರೂ ಒಂದೇ ಬೈಕ್‌ನಲ್ಲಿ ಕಾರ್ಯನಿಮಿತ್ತ ಮದ್ದೂರಿಗೆ ಆಗಮಿಸಿ, ವಾಪಸ್ ಕದಲೂರು ಗ್ರಾಮಕ್ಕೆ ತೆರಳುವಾಗ ಶಿವಪುರದ ಸತ್ಯಾಗ್ರಹ ಸೌಧದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





