ಮದ್ದೂರು : ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈಲು ತಡೆಯಲು ಯತ್ನಿಸಿದ ರೈತರನ್ನು ತಾಲೂಕಿನ ಗೆಜ್ಜಲಗೆರೆಯಲ್ಲಿ ಪೊಲೀಸರು ಬಂದಿಸಿದರು.
ರೈತ ಸಂಘದ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ವಂದೇ ಭಾರತ್ ರೈಲು ತಡೆಗೆ ಸಿದ್ಧತೆ ನಡೆಸಿ ಹಳಿ ಮೇಲೆ ಓಡಿದ ರೈತರನ್ನು ಪೊಲೀಸರು ತಡೆದು ಬಂದಿಸಿದ್ದಾರೆ. ರೈತರನ್ನು ಎರಡು ಬಸ್ ಕಳಲ್ಲಿ ತುಂಬಿಕೊಂಡು ಕರೆದುಕೊಂಡು ಹೋದರು.
ರೈಲು ತಡೆ ಚಳವಳಿ ನಡೆಸುವುದಾಗಿ ಘೋಷಿಸಿದ್ದ ರೈತರನ್ನು ತಡೆಯಲು ನೂರು ಮೀಟರ್ ದೂರದಲ್ಲೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು, ರೈಲು ತಡೆಯಲು ರೈತರು ಜಮಾವಣೆ ಗೊಂಡು ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು,ಪ್ರತಿಭಟನಾ ನಿರತ ರೈತರನ್ನು ತಡೆದ ಪೊಲೀಸರ ವಿರುದ್ಧವು ದಿಕ್ಕಾರ ಕೂಗಲಾಯಿತು.
ರೈಲ್ವೆ ಹಳಿ ಬಳಿ ಪ್ರತಿಭಟನೆಗೆ ಅವಕಾಶ ಕಲ್ಪಿಸುವಂತೆ ರೈತರು ಕೋರಿದಾಗ ನೂರಾರು ರೈತರನ್ನು ಬ್ಯಾರಿಕೇಡ್ ಬಳಿ ತಡೆದು ಎಲ್ಲರಿಗೂ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏಳು ರೈತರಿಗೆ ಅವಕಾಶ ಮಾಡಿಕೊಟ್ಟರು.
ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು, ಪ್ರತಿಭಟನಾ ನಿರತ ರೈತರನ್ನು ನಿಯಂತ್ರಣ ಮಾಡಲು ಪೊಲೀಸರು ಹರ ಸಾಹಸ ಪಟ್ಟರು. ಕೆಲವು ರೈತರು ಒಳ ನುಗ್ಗಿ ಹಳಿಗಳ ಮೇಲೆ ಓಡಿದರು,ಪೊಲೀಸರು ಹಿಡಿದು ಎಲ್ಲಾ ರೈತರನ್ನು ಬಂದಿಸಿದರು. ರೈಲು ಹಳಿಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.





