Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ನನ್ನ ಮೇಲಿನ ಲಂಚದ ಆರೋಪ ಸತ್ಯಕ್ಕೆ ದೂರವಾಗಿದೆ : ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

ಮಂಡ್ಯ : ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಲಂಚಕ್ಕೆ ಒತ್ತಾಯಿಸಲಾಗಿದೆ ಎಂದು ಕೆಲ ಮಾಧ್ಯಮದಲ್ಲಿ ಮರು ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾಗಿದೆ.

ಮಂಡ್ಯ ಜಿಲ್ಲೆಯ ಅಧಿಕಾರಿಗಳೆಂದು ಬಿಂಬಿಸಿ ರಾಜ್ಯಪಾಲರಿಗೆ ನೀಡಿರುವ ದೂರು ಪಿತೂರಿ ಸ್ವರೂಪದಲ್ಲಿದ್ದು, ನಕಲಿ ವ್ಯಕ್ತಿಗಳು ಮಾಡಿರುವ ಯೋಜಿತ ಸಂಚಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸರ್ಕಾರದ ಜನಪರ ಆಡಳಿತದಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಲೇ ಬಂದಿದ್ದು, ಇದು ಹತಾಶ ಮನೋಭಾವವಾಗಿದೆ. ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ರಾಜ್ಯಪಾಲರಿಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರುಪತ್ರ ಸೃಷ್ಟಿ ಮಾಡಿ ಕಳುಹಿಸಲಾಗಿದೆ ಎಂದರು. ಉದ್ದೇಶ ಪೂರ್ವಕವಾಗಿ ಕೆಟ್ಟ ಹೆಸರು ತರುವ ಪ್ರಯತ್ನ ಮುಂದುವರೆದಿದೆ. ಹಾಗಾಗಿಯೇ ರಾಜ್ಯಪಾಲರಿಗೆ ನಕಲಿ ಪತ್ರ ಸೃಷ್ಟಿ ಮಾಡಿ ಸಲ್ಲಿಸಲಾಗಿದೆ. ಇದಕ್ಕೆ ಈ ಗಾಗಲೇ ಈ ಬಗ್ಗೆ ಉತ್ತರಿಸಲಾಗಿದೆ. ಆದರೂ ಇದು ಹುಸಿ ದೂರು ಎಂಬುದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ. ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ ಪಡೆಯುವಂತೆ ಮುಖ್ಯಮಂತ್ರಿಗಳನ್ನು ನಾನೇ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ನಮ್ಮನ್ನ ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ ಮತ್ತಷ್ಟು ಪ್ರಕಾಶಮಾನವಾಗುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಯಾರ ಬಳಿ ಮಾತನಾಡುವುದಾಗಲಿ, ಭೇಟಿ ಮಾಡುವುದಾಗಲಿ ಮಾಡಿಲ್ಲ. ನಾನು ಯಾವ ಎ.ಡಿ.ಗಳನ್ನೂ ಭೇಟಿ ಮಾಡಿಲ್ಲ. ರಾಜ್ಯದಲ್ಲೇ ಮಾಡಿಲ್ಲ, ನನ್ನ ಜಿಲ್ಲೆಯಲ್ಲಿ ಮಾಡ್ತೀನಾ? ಬೆಳಿಗ್ಗೆ ಎದ್ದು ತಿಂಡಿ, ಊಟ ಮಾಡದೆ ನನ್ನ ಟಾರ್ಗೆಟ್ ಮಾಡುವುದೇ ಕೆಲವರಿಗೆ ಕೆಲಸವಾಗಿದೆ. ಅದಕ್ಕೆ ನನಗೆ ಬೇಜಾರಿಲ್ಲ, ನನ್ನ ಕೆಲಸ ನಾನು ಮಾಡ್ತೀನಿ ಎಂದರು.

ಅಧಿಕಾರಿಗಳು ಪತ್ರ ಬರೆದಿಲ್ಲ : ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ನೀಡಿರುವ ವಿಚಾರ ನನಗೆ ಮಾಧ್ಯಮಗಳಿಂದ ಗೊತ್ತಾಗಿದೆ. ಆದರೆ, ನಮ್ಮ ಜಿಲ್ಲೆಯ ಅಧಿಕಾರಿಗಳಿಂದ ಯಾವುದೇ ದೂರು ಹೋಗಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.

ಈ ಸಂಬಂಧವಾಗಿ ನಾನು ಈಗಾಗಲೇ ಸಹಾಯಕ ನಿರ್ದೇಶಕರನ್ನ ಗೂಗಲ್ ಮೀಟ್ ಮೂಲಕ ಸಂಪರ್ಕಿಸಿ ಕೇಳಲಾಗಿ, ಈ ರೀತಿಯ ಯಾವುದೇ ಪತ್ರ ಬರೆದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಎಎಸ್ಪಿ ಮೂಲಕ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಈ ಫೇಕ್ ಲೆಟರ್ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಸಚಿವರಿಂದ ಮಾಹಿತಿ ಪಡೆದ ಸಿಎಂ : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಹೊರಿಸಿ ಸಹಾಯಕ ಕೃಷಿ ನಿರ್ದೇಶಕರು ರಾಜಭವನಕ್ಕೆ ದೂರು ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಚಿವರಿಗೆ ಕರೆ ಮಾಡಿ ಮಾಹಿತಿ ಪಡೆದರು. ಈ ರೀತಿ ಗಂಭೀರ ಆರೋಪ ಕೇಳಿ ಬಂದಿದೆಯಲ್ಲ ಎಂದು ಕೇಳಿದ್ದು, ಈ ಬಗ್ಗೆ ಎಲ್ಲ ರೀತಿಯಲ್ಲೂ ತನಿಖೆ ಮಾಡಿ, ಈ ಪತ್ರದ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆ ಹೊರತರಲಿ. ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ಎಸ್ಪಿ, ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದಿದ್ದೇನೆ. ಜೆ.ಡಿ. ಅವರು ಈಗಾಗಲೇ ಜೂಮ್ ಮೀಟಿಂಗ್ ಮಾಡಿದ್ದಾರೆ. ಯಾವ ಎ.ಡಿ. ಅವರೂ ನಾವು ಪತ್ರ ಬರೆದಿಲ್ಲ ಎಂದಿದ್ದಾರೆ. ಮಂಡ್ಯ ಎಸ್ಪಿ ಅವರಿಗೂ ಈ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ಎಸ್ಪಿ ಅವರ ಪ್ರಾಥಮಿಕ ತನಿಖೆಯಿಂದ ಫೇಕ್ ಅನ್ನೋದು ಸಾಬೀತಾಗಿದೆಯಂತೆ. ಈ ಹಿಂದೆ ಕಂಡಕ್ಟರ್ ವಿಚಾರದಲ್ಲೂ ನನ್ನ ಮೇಲೆ ಆರೋಪ ಮಾಡಿದರು. ಈಗಲೂ ಅವರೇ ಇದನ್ನು ಮಾಡಿರಬೇಕು. ಇದು ಫೇಕ್ ಲೆಟರ್ ಅಂತ ನಾನು ಹೇಳೋದಿಲ್ಲ. ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ ಎಂದು ಸಚಿವರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!