Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸಕಲ ಸಿದ್ದತೆ: ಡಾ.ಕುಮಾರ

ಮಂಡ್ಯ: ಈ‌ ಬಾರಿಯ ಶ್ರೀರಂಗಪಟ್ಟಣ ದಸರಾವನ್ನು ಪಾರಂಪರಿಕ ಹಾಗೂ ವಿಜೃಂಭಣೆಯಿಂದ  ಅಕ್ಟೋಬರ್ 4 -7 ರವರೆಗೆ ಆಚರಿಸಲಾಗುತ್ತಿದ್ದು, ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಅವರು ಇಂದು ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ನಡೆದ ದಸರಾ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಡಚಣೆ ತೊಂದರೆ ಉಂಟಾಗದಂತೆ ನಿಗಾವಹಿಸಿ ಎಂದರು.

ಶ್ರೀರಂಗಪಟ್ಟಣ ದಸರಾ ಆಚರಣೆಯ ಸಕಲಸಿದ್ಧತೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಕಾರ್ಯಕ್ರಮದ ವಿಚಾರಗಳನ್ನು ಚರ್ಚಿಸಿ ಕಳೆದ ದಸರಾ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆ ತುಂಬಾ ಚಿಕ್ಕದಿದ್ದ ಕಾರಣ ಸ್ವಲ್ಪ ಪ್ರಮಾಣದ ತೊಂದರೆಗಳು ಆಗಿತ್ತು, ಆದ್ದರಿಂದ ಈ ಬಾರಿ ಕಾರ್ಯಕ್ರಮದ ವೇದಿಕೆಯನ್ನು ಅಗತ್ಯತೆಗೆ ತಕ್ಕಂತೆ ದೊಡ್ಡದಾಗಿ ನಿರ್ಮಾಣ ಮಾಡಬೇಕು‌ ಎಂದರು.

ಆಹ್ವಾನ ಪತ್ರಿಕೆ ವಿತರಣೆ
ದಸರಾ ಆಚರಣೆಯ ಆಹ್ವಾನ ಪತ್ರಿಕೆಗಳನ್ನು ಆದಷ್ಟು ಬೇಗ ಸಿದ್ದಪಡಿಸಬೇಕು. ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ, ಸಂಘ ಸಂಸ್ಥೆಗಳಿಗೆ ವಿತರಿಸಿ ಗೌರವಪೂರ್ವಕವಾಗಿ ಆಹ್ವಾನಿಸಬೇಕು. ಆಹ್ವಾನ ಪತ್ರಿಕೆಯೊಂದಿಗೆ ದಸರಾ ಕಾರ್ಯಕ್ರಮಗಳ ವಿವರ ನೀಡುವ 5 ದಸರಾ ಕರಪತ್ರಗಳನ್ನು ಸೇರಿಸಿ ಕೊಡಬೇಕು, ಆಹ್ವಾನ ಪತ್ರಿಕೆ ವಿತರಣೆಯಲ್ಲಿ ಯಾವುದೇ ದೂರು ಬರಬಾರದು ಎಂದರು.

ಕುಡಿಯುವ ನೀರಿನ ವ್ಯವಸ್ಥೆ
ಕುಡಿಯುವ ನೀರಿನ ವ್ಯವಸ್ಥೆ ಬಹಳ ಮುಖ್ಯವಾದ ಅಂಶ ಬಂದಂತಹ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ವೇಳೆಯಲ್ಲಿ ವೇದಿಕೆಯ ಬಳಿ ಹಾಗೂ ವೀಕ್ಷಕರ ಗ್ಯಾಲರಿಯ ಬಳಿ ಕುಡಿಯುವ ನೀರಿನ ಕ್ಯಾನ್ ಗಳ ವ್ಯವಸ್ಥೆ ಮಾಡಬೇಕು ಎಂದರು.

ಆರೋಗ್ಯ ತಪಾಸಣಾ ಶಿಬಿರ
ಆರೋಗ್ಯ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಎರಡು ಪಾಳಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಎಂದರು.

ಆಹಾರ ಮೇಳ
ಆಹಾರ ಮೇಳದಲ್ಲಿ 40 ಮಳಿಗೆ (ಕೌಂಟರ್) ಗಳನ್ನು ತೆರೆಯಲಿದ್ದು, ಆಹಾರ ಮಳಿಗೆಗಳನ್ನು ಪರವಾನಗಿ ಹೊಂದಿರುವವರಿಗೆ ಮಾತ್ರ ನೀಡಬೇಕು. ಅನುಮತಿ ಪಡೆಯುವ ಎಲ್ಲಾ ಮಳಿಗೆಯ ತಯಾರಿಕೆಯ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಆಹಾರ ಮೇಳದಲ್ಲಿ ಕೆಲಸಮಾಡುವವರು ಶುಚಿತ್ವ ಕಾಪಾಡಬೇಕು. ಆಹಾರ ವಿತರಣೆ ಮಾಡುವವರು ಕೈಗೆ ಗ್ಲೌಸ್ ಹಾಗೂ ಡ್ರೆಸ್ ಕೋಡ್ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕು
ಸ್ವಚ್ಛತೆಯನ್ನು ಕಪಾಡಲು ಅವಶ್ಯಕವಾಗಿರುವ ಪೌರಕಾರ್ಮಿಕ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಿ. ಅಗತ್ಯವಿರುವ ಕಡೆ ಕಸದತೊಟ್ಟಿಗಳನ್ನು ಇಡಿ. ಸಾರ್ವಜನಿಕರಿಗೆ ಸ್ವಚ್ಚತೆ ಕಪಾಡುವಂತೆ ಪ್ರೇರೇಪಿಸಿ. ಪ್ರತಿ ಗಂಟೆಗೊಮ್ಮೆ ಸುತ್ತಮುತ್ತಲು ಶುಚಿಪಡಿಸುವ ಕೆಲಸವಾಗಬೇಕು ಎಂದರು.

ಸಾಂಸ್ಕೃತಿಕ ಸಮಿತಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗೌರವಧನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags: