ಮಂಡ್ಯ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ ಜಲಾಶಯವು ಮುಂಚಿತವಾಗಿ ಭರ್ತಿ ಆಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮರ್ಪಕ ವಿತರಣೆಗೆ ಕ್ರಮವಹಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ದ್ವಿದಳಧಾನ್ಯ, ಮುಸುಕಿನ ಜೋಳ ಹಾಗೂ ಎಣ್ಣೆಕಾಳು ಬೆಳೆಗಳ ಬಿತ್ತನೆ ಬೀಜ, ಹಸಿರೆಲೆ ಗೊಬ್ಬರ (ಸೆಣಬು ಹಾಗೂ ಚಂಬೆ) ಬಿತ್ತನೆ ಬೀಜವನ್ನು ಮತ್ತು ಲಘು ಪೋಷಕಾಂಶಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಭತ್ತದ ಬಿತ್ತನೆ ಬೀಜಗಳನ್ನು ಮುಂಗಡ ದಾಸ್ತಾನಿಕರಿಸಲಾಗಿದ್ದು, ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಒ.ಗಳ ಮುಖಾಂತರ ಸಹಾಯಧನದಲ್ಲಿ ವಿತರಣೆಗೆ ಕೃಷಿ ಇಲಾಖೆಯು ಕ್ರಮ ಕೈಗೊಳ್ಳಲಾಗುತ್ತಿದೆ.
ರೈತರು ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಖರೀದಿಸುವ ಸಂದರ್ಭದಲ್ಲಿ, ಕೃಷಿ ವಿಶ್ವವಿದ್ಯಾನಿಲಯದಿಂದ ಬಿತ್ತನೆ ಅವಧಿಗೆ ಶಿಫಾರಸ್ಸು ಮಾಡಿರುವ ತಳಿ ಮತ್ತು ಹೈಬ್ರೀಡ್ ಬಿತ್ತನೆ ಬೀಜಗಳನ್ನು ಪರಿಗಣಿಸಲು ಕೋರಿದೆ.
ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 73065 ಮೆ.ಟನ್ ರಸಗೊಬ್ಬರ ಅವಶ್ಯಕತೆಯಿದ್ದು, ಪ್ರಸ್ತುತ 36598 ಮೆ.ಟನ್ ಪ್ರಮಾಣದ ರಸಗೊಬ್ಬರವು ಚಿಲ್ಲರೆ ರಸಗೊಬ್ಬರ ಮಾರಾಟಗಾರರು, ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಗೋದಾಮುಗಳಲ್ಲಿ ದಾಸ್ತಾನೀಕರಿಸಲಾಗಿದೆ. ಉಳಿಕೆ ರಸಗೊಬ್ಬರವನ್ನು ಮಾಹೆವಾರು ಬೇಡಿಕೆ ಅನುಗುಣವಾಗಿ ಸರಬರಾಜು ಪಡೆದು ಸಮರ್ಪಕ ವಿತರಣೆಗೆ ಕ್ರಮಕೈಗೊಳ್ಳಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿಗೆ ಸಭೆ ಆಯೋಜಿಸಿ, ಗುಣಮಟ್ಟದ ಕೃಷಿ ಪರಿಕರಗಳನ್ನು ಮಾತ್ರ ಮಾರಾಟ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರಸ್ತುತ ಜಿಲ್ಲೆಯ ರೈತರಿಗೆ ಅವಶ್ಯಕತೆಯಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ ಯಾವುದೇ ಕೊರತೆಯಿರುವುದಿಲ್ಲ.
ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು, ತಳಿಗಳ ಆಯ್ಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ವಿ.ಸಿ. ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





