ಮಂಡ್ಯ: ಸತ್ಯಹರಿಶ್ಚಂದ್ರನ ನಂತರ ಕುಮಾರಸ್ವಾಮಿಯೇ ಸತ್ಯವಂತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯಹರಿಶ್ಚಂದ್ರನ ನಂತರ ಇತರರಿಂದ ದುಡ್ಡು, ಲಂಚ ಪಡೆಯದೇ ಇರುವವರು, ಭೂಮಿಯ ಮೇಲೆ ಯಾರದ್ದೂ ಸಹಾಯ ಪಡೆಯದೇ ಇರುವವರು ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ಯಾರಾದರೂ ಸತ್ಯವಂತ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ವ್ಯಂಗ್ಯವಾಡಿದರು.
ಇನ್ನು ಮಂಡ್ಯ ಜಿಲ್ಲೆಯ ಲೋಕಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿಯಾಗಿ ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಹೆಮ್ಮೆ ಎನಿಸುವುದು. ಉದಾಸೀನ ಹೇಳಿಕೆಗಳ ಮೂಲಕ ಸರ್ಕಾರವನ್ನು ಹಾಗೂ ಇತರರನ್ನು ಟೀಕಿಸುವುದೇ ನಾಯಕತ್ವ ಎನಿಸಿಕೊಳ್ಳುವಂತೆ ಮಾತನಾಡುತ್ತಾರೆ ಎಂದು ಕುಟುಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಸಾಧ್ಯವಾದಲ್ಲಿ ಜಿಲ್ಲೆಯಲ್ಲಿ ಪಾಂಡವಪುರದಿಂದ ಚನ್ನರಾಯಪಟ್ಟಣ ರಸ್ತೆ, ಮಂಡ್ಯದಿಂದ ಪ್ರವಾಸಿ ತಾಣ ಮೇಲುಕೋಟೆ ರಸ್ತೆ, ಮಂಡ್ಯದಿಂದ ನಾಗಮಂಗಲ ಮೂಲಕ ಕದಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಬದಲಿಸುವರೋ, ವಿಶೇಷ ಅನುದಾನ ತರುವರೋ ಅಭಿವೃದ್ಧಿ ಮಾಡಿದರೆ ಕುಮಾರಸ್ವಾಮಿ ಅವರನ್ನು ಹೊಗಳಿ, ಸನ್ಮಾನ ಮಾಡುತ್ತೇನೆ ಎಂದು ಮನವಿ ಮಾಡಿದರು. ಇಂದು ಮಂಡ್ಯಕ್ಕೆ ಕೃಷಿ ವಿವಿ, ನೂತನ ಮೈಷುಗರ್ ಕಾರ್ಖಾನೆ ಘೋಷಣೆಯನ್ನು ಸಂಪುಟದ ಮುಂದೆ ತರುತಿದ್ದು ಇಂತಹ ಯಾವುದಾದರು ಅಭಿವೃದ್ಧಿಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಲಿಲ್ಲ. ಈಗ ಕೇಂದ್ರದ ಮಂತ್ರಿಯಾಗಿದ್ದು, ಇಂತಹ ಹತ್ತು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಗೆ ತರಬಹುದು. ಒಂದು ವೇಳೆ ಅದನ್ನು ಮಾಡಿದರೆ ಅವರನ್ನು ಕೂಡ ಅಭಿನಂದಿಸುತ್ತೇನೆ ಎಂದರು.