Mysore
28
scattered clouds

Social Media

ಸೋಮವಾರ, 05 ಜನವರಿ 2026
Light
Dark

ಮಂಡ್ಯ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ 2 ಗಂಟೆ ವಿದ್ಯುತ್‌ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಮಂಡ್ಯ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯ ಕೃಷಿ ಪಂಪ್ ಸೆಟ್‌ಗಳಿಗೆ ಈಗ ಲಭ್ಯವಿರುವ ಏಳು ತಾಸು ತ್ರಿಫೇಸ್ ವಿದ್ಯುತ್ ಜೊತೆ ಹೆಚ್ಚುವರಿಯಾಗಿ ಎರಡು ಗಂಟೆ ವಿದ್ಯುತ್ ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಂಡ್ಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಕಬ್ಬು ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅದರಲ್ಲೂ ಮಾರ್ಚ್ ಅಂತ್ಯದವರೆಗೆ ಕಬ್ಬು ಬೆಳೆಗೆ ನಿರಂತರ ನೀರಿನ ಅಗತ್ಯವಿರುವುದರಿಂದ ಕೃಷಿ ಪಂಪ್‌ಸೆಟ್ಗಳಿಗೆ ಈಗಿರುವ ಏಳು ಗಂಟೆ ವಿದ್ಯುತ್ ಜೊತೆಗೆ ಹೆಚ್ಚುವರಿಯಾಗಿ ಎರಡು ಗಂಟೆ ವಿದ್ಯುತ್ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ, ಪ್ರಸ್ತಾವನೆ ಆಧರಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಕಳೆದ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಈ ಬಾರಿ ಹಿಂಗಾರಿನಲ್ಲಿ ಕೃಷಿ ಪ್ರದೇಶ ವಿಸ್ತರಣೆಯಾಗಲಿದ್ದು, ಹೆಚ್ಚುವರಿ ವಿದ್ಯುತ್ ಬೇಕಾಗುತ್ತದೆ ಎಂಬ ಬಗ್ಗೆ ಕೃತಕ ಬುದ್ಧಿಮತ್ತೆ ಆಧರಿಸಿ ಲೋಡ್ ಡಿಸ್ಪ್ಯಾಚ್ ಸೆಂಟರ್ ಮತ್ತು ಪಿಸಿಕೆಎಲ್ ನವರು ಲೆಕ್ಕ ಹಾಕಿದ್ದಾರೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಪ್ರದೇಶ ಕಳೆದ ಬಾರಿಗಿಂತ ಶೇಕಡಾ.30ರಷ್ಟು ಏರಿಕೆಯಾಗಲಿದೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

Tags:
error: Content is protected !!