ಮಂಡ್ಯ: ಕೃಷಿ ಪ್ರಧಾನ ಜಿಲ್ಲೆ ಹಾಗೂ ಸಕ್ಕರೆ ನಾಡು ಎಂದು ಕರೆಯಿಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 95 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 2015 ಇಸವಿಯಿಂದ ಈಚೆಗೆ ಮಂಡ್ಯ ಜಿಲ್ಲೆಯಲ್ಲಿ ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಸಾಲದ ಶೂಲಕ್ಕೆ ಸಿಲುಕಿ ರೈತರು ಸಾವೀಗೀಡಾಗುತ್ತಿದ್ದಾರೆ.
ಅನ್ನದಾತರ ಜೀವನ ಭದ್ರತೆ, ಕೃಷಿಯಲ್ಲಿನ ಸಮಸ್ಯೆಗಳು, ಕಬ್ಬು ಸೇರಿದಂತೆ ಅನೇಕ ಉತ್ಪನ್ನಗಳಿಗೆ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಅನೇಕ ಸಮಸ್ಯೆಗಳಿಂದಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿ ಬಹಿರಂಗವಾಗಿದೆ.
ಇದರ ಜೊತೆಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ರೈತರು, ಬೆಳೆ ನಾಶದಿಂದ ತೀವ್ರ ಕಂಗಾಲಾಗುತ್ತಿದ್ದಾರೆ.
ಇದರ ಜೊತೆಗೆ ನೀರು, ವಿದ್ಯುತ್ ಸಮಸ್ಯೆ, ಬೆಳೆಗಳಿಗೆ ಬೆಲೆ ಕುಸಿತ, ಹವಾಮಾನ ವೈಪರೀತ್ಯ, ರಸಗೊಬ್ಬರಗಳ ಬೆಲೆ ಏರಿಕೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ, ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಸೇರಿದಂತೆ ಹತ್ತಾರು ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.