ಶ್ರೀರಂಗಪಟ್ಟಣ : ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಯಿಂದ 85,000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡುವ ಸಾಧ್ಯತೆಯಿದೆ. ಆ ಕಾರಣದಿಂದ ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಕೂಡಲೇ ಸೂಕ್ತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮುನ್ನೆಚ್ಚರಿಕೆಯ ಪ್ರಕಟಣೆ ಹೊರಡಿಸಿರುವ ಅವರು, ಮಡಿಕೇರಿ, ಭಾಗಮಂಡಲ ಸೇರಿದಂತೆ ಕಾವೇರಿ ಜಲಾಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಕನ್ನಂಬಾಡಿ ಅಣೆಕಟ್ಟೆ ಈಗಾಗಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ. ಕಾವೇರಿ ನದಿ ತೀರ ಪ್ರದೇಶಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ರಾಜ್ಯದ ನಿವಾಸಿಗಳು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಅನಾವಶ್ಯವಾಗಿ ನೀರಿಗಿಳಿಯದಂತೆ ನಾಮಫಲಕ ಅಳವಡಿಸಿ, ಬಿಗಿ ಭದ್ರತೆ ಒದಗಿಸಲಾಗಿದೆ.
ಕಾವೇರಿ ನದಿಯಲ್ಲಿ ೮೫ ಸಾವಿರ ಕ್ಯೂ. ನೀರು ಹರಿಯುತ್ತಿರುವ ಪರಿಣಾಮ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತಕ್ಕೆ ಬಂದಿರುವ ದೃಶ್ಯ.





