Mysore
17
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮಂಡ್ಯ | ಜಿಲ್ಲೆಯಲ್ಲಿ 24 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು

fertilizer aggricultiure

ಮಂಡ್ಯ : ಜಿಲ್ಲೆಯಲ್ಲಿ ಪ್ರಸ್ತುತ ಯೂರಿಯಾ, ಡಿ.ಎ.ಪಿ, ಎಂ.ಓ.ಪಿ, ಎಸ್.ಎಸ್.ಪಿ, ಕಾಂಪ್ಲೆಕ್ಸ್ ಸೇರಿದಂತೆ 24,471 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಸಗೊಬ್ಬರ ಸಮರ್ಪಕವಾಗಿ ನಿರ್ವಹಣೆ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕುವಾರು ತಹಶೀಲ್ದಾರ್ ಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರ ದಾಸ್ತಾನುಗಳ ಉಳಿಕೆ , ಹಾಗೂ ಗೊಬ್ಬರಗಳ ದರವನ್ನು ನಮೂದಿಸಿರುವ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿದರು.

ಕಾಳಸಂತೆ ಹಾಗೂ ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ರಸಗೊಬ್ಬರ ಮಾರಾಟಗಾರರೊಂದಿಗೆ ಸಭೆ ನಡೆಸಿ ರಸ ಗೊಬ್ಬರಗಳನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಪಶುಸಂಗೋಪನೆ ಇಲಾಖೆಯ ವತಿಯಿಂದ ಮೇವು ಬೆಳೆಗಳಿಗೆ ಯೂರಿಯಾ ಬಳಕೆಯನ್ನು ಕಡಿಮೆ ಮಾಡಿಸಬೇಕು ಹಾಗೂ ರೇಷ್ಮೆ ಬೆಳೆಗಳಿಗೂ ಸಹ ಯೂರಿಯಾ ಬಳಕೆ ಮಾಡುವುದರಿಂದ ಗೂಡಿನ ಗುಣಮಟ್ಟ ಕುಂದುತ್ತದೆ ಎಂದು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಬೆಳೆ ನಾಟಿ ಮಾಡುವ ಸಂದರ್ಭದಲ್ಲಿ ರೈತರು ನ್ಯಾನೋ ಯೂರಿಯಾ, ಕಾಂಪ್ಲೆಕ್ಸ್ ಅನ್ನು ಬಳಸಿ. ಮೆಲ್ಗೊಬ್ಬರದ ಸಂದರ್ಭದಲ್ಲಿ ಯೂರಿಯಾ ಬಳಸುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಅಧಿಕಾರಿಗಳು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಮಂಡ್ಯ ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!