ಮದ್ದೂರು : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅಗರಲಿಂಗನದೊಡ್ಡಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ.
ಕಾರಿನಲ್ಲಿದ್ದ ಬೆಂಗಳೂರು ಮೂಲದ ಮಕ್ಸೂದ್ (21), ಅಯಾನ್ (25) ಮೃತಪಟ್ಟವರು. ಮುಜಾಹಿದ್ ಪಾಷ, ಬಸವರಾಜು, ಪಾರ್ವತಿ, ನಾಗರತ್ನ ಹಾಗೂ ನಾಗರಾಜು ಗಾಯಗೊಂಡ ವ್ಯಕ್ತಿಗಳಾಗಿದ್ದು, ಇವರಿಗೆ ಚನ್ನಪಟ್ಟಣದ ಚಾಮುಂಡೇಶ್ವರಿ ಆಸ್ಪತ್ರೆ ಮತ್ತು ಮದ್ದೂರಿನ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮೈಸೂರಿಗೆ ಸ್ಕೋಡಾ ಕಾರಿನಲ್ಲಿ ಮಕ್ಸೂದ್, ಅಯಾನ್ ಹಾಗೂ ಮುಜಾಹಿದ್ ಪಾಷ ಪ್ರಯಾಣಿಸುತ್ತಿದ್ದರು. ಈ ಕಾರು ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟೊಯಟಾ ಇತಿಯೋಸ್ ಮತ್ತು ಇನ್ನೋವಾ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇನ್ನೊಂದು ಕಾರಿನಲ್ಲಿದ್ದ ಬೆಂಗಳೂರು ಮೂಲದ ಪಾರ್ವತಿ, ಬಸವರಾಜು, ನಾಗರತ್ನ ಹಾಗೂ ನಾಗರಾಜು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳ ತೆರವು ಕಾರ್ಯಾಚರಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಕುರಿತು ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





