Mysore
20
overcast clouds
Light
Dark

KRS ಜಲಾಶಯದಿಂದ 1,50,000 ಕ್ಯೂಸೆಕ್ಸ್ ನೀರು ಬಿಡುಗಡೆ: ಮುನ್ನೆಚ್ಚರಿಕೆಗೆ ಸಚಿವರ ಸೂಚನೆ

ಮಂಡ್ಯ:  ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಜಾಲಾಶಯಗಳಿಂದ ಸುಮಾರು 1,50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಸಲಾಗುವುದು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಯಾವುದೇ ಜನ- ಜನುವಾರುಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.

ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವುದು. ಯಾವುದೇ ತೊಂದರೆಯಿದ್ದಲ್ಲ ತಕ್ಷಣ ತಮ್ಮ ತಾಲ್ಲೂಕು ಅಥವಾ ಜಿಲ್ಲಾ ಕಂಟ್ರೋಲ್ ರೂಂ ಗೆ ಕರೆ ಮಾಡಿ ರಕ್ಷಣೆ ಪಡೆದುಕೊಳ್ಳುವುದು. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ನದಿ ಪಾತ್ರದಲ್ಲಿ ಹಾಗೂ ಹೆಚ್ಚು ನೀರು ಹರಿಯುವ ಪ್ರದೇಶದಲ್ಲಿ ನೀರಿನ ರಭಸದ ಬಗ್ಗೆ ಹೇಳಲು ಸಾಧ್ಯವಿಲ್ಲ. ಸೆಲ್ಫಿ ತೆಗೆದುಕೊಳ್ಳುವ ಅಥವಾ ನೀರಿನಲ್ಲಿ ಆಟವಾಡುವ ಉತ್ಸಾಹದಲ್ಲಿ ಪ್ರಾಣಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ನದಿ ಪಾತ್ರದ ಪ್ರದೇಶದಲ್ಲಿ ಎಚ್ಚರಿಕೆ ವಹಿಸಿ.

ಮಳವಳ್ಳಿ ತಾಲ್ಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಸಹ ಕ್ರಮ ವಹಿಸಲಾಗುತ್ತಿದೆ. ರೈತರು, ಸಾರ್ವಜನಿಕರು ಅದರಲ್ಲೂ ಸಹ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಸಚಿವರು ಕೋರಿದ್ದಾರೆ.