ಮಂಡ್ಯ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಲಿದ್ದು, ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದ್ದಾರೆ.
ಗುರುವಾರ ಪಾಂಡವಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಇಂದು ಚೆನ್ನೈನಲ್ಲಿ ಕುಮಾರಸ್ವಾಮಿಯವರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಬಂದ ಬಳಿಕ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಅಷ್ಟೇ ಬರಲಿ ಎಂದು ಹೇಳಿದ್ದೇವೆ. ನಾವೇ ಓಡಾಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಎಂದು ಅಧಿಕೃತವಾಗಿ ಮಾಹಿತಿ ನೀಡಲಿದೆ. ಟಿಕೆಟ್ ಘೋಷಣೆ ಬಳಿಕ ಸುಮಲತಾ ಅವರೊಂದಿಗೂ ಮಾತಾನಾಡುತ್ತೇವೆ. ಅವರು ಹೇಗೆ ನಡೆದುಕೊಳ್ಳಬೇಕು, ನಾವು ಹೇಗೆ ನಡೆದುಕೊಳ್ಳಬೇಕು ಎಂದು ರಾಷ್ಟ್ರ ನಾಯಕರು ಹೇಳುತ್ತಾರೆ. ಆ ಮೂಲಕ ಕ್ಷೇತ್ರದ ಗೆಲುವಿಗೆ ಎಲ್ಲರೂ ಒಗ್ಗಟ್ಟನಿಂದ ದುಡಿಯುತ್ತೇವೆ ಎಂದು ಪುಟ್ಟರಾಜು ಹೇಳಿದರು.





