ಮದ್ದೂರು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಕರುವನ್ನು ಹೊತ್ತೊಯ್ದ ಚಿರತೆ ತಿಂದು ಹಾಕಿರುವ ಘಟನೆ ತಾಲ್ಲೂಕಿನ ಮಾದಾಪುರದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ಅಭಿ ಎಂಬುವರಿಗೆ ಸೇರಿದ ಹಸುವಿನ ಕರುವನ್ನು ಶುಕ್ರವಾರ ತಡರಾತ್ರಿ ಚಿರತೆ ಹೊತ್ತೊಯ್ದು ತಿಂದು ಹಾಕಿದೆ.
ಪ್ರತಿನಿತ್ಯ ಕೊಟ್ಟಿಗೆಯಲ್ಲಿ ಹಸು ಮತ್ತು ಕರುವನ್ನು ಕಟ್ಟಿ ಹಾಕಲಾಗುತ್ತಿತ್ತು. ಚಿರತೆ ರಾತ್ರಿ ವೇಳೆ ದಾಳಿ ಮಾಡಿ ಕರುವನ್ನು ಅನತಿ ದೂರ ಎಳೆದೊಯ್ದು ಅರ್ಧ ಭಾಗ ತಿಂದು ಹಾಕಿದೆ.
ಚಿರತೆ ದಾಳಿ ಮಾಡಿರುವ ಬೆನ್ನೆಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜಮೀನಿಗೆ ತೆರಳಲು ರೈತರು ಆತಂಕ ಪಡುತ್ತಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮದಲ್ಲಿ ಭೀತಿ ಸೃಷ್ಟಿಸಿದೆ.
ಕರು ಕಳೆದುಕೊಂಡ ರೈತನ ಕುಟುಂಬ ಕಂಗಾಲಾಗಿದ್ದು, ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದು, ಇದೇ ವೇಳೆ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.