Mysore
22
overcast clouds

Social Media

ಗುರುವಾರ, 01 ಜನವರಿ 2026
Light
Dark

ಮಂಡ್ಯ : ದಂಡ ಪಾವತಿಗಾಗಿ ಪಾದಾಚಾರಿ ಮಾರ್ಗದಲ್ಲಿ ದಂಪತಿಯನ್ನು ಕೂರಿಸಿ ಶಿಕ್ಷೆ!

ಮಂಡ್ಯ: ಏಳೆಂಟು ತಿಂಗಳ ಹಸುಗೂಸುವಿನೊಂದಿಗೆ ಜಿಲ್ಲಾಸ್ಪತ್ರೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು ದಂಡ ಪಾವತಿಸುವವರೆಗೂ ತಾಯಿ ಮತ್ತು ಮಗುವನ್ನು ವಾಹನ ದಟ್ಟಣೆಯ ರಸ್ತೆ ಬದಿಯ ಪಾದಾಚಾರಿ ಮಾರ್ಗದಲ್ಲಿ ಕೂರಿಸಿದ ಸಂಚಾರ ಪೊಲೀಸರ ನಡೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಯಗುಚಗುಪ್ಪೆ ಗ್ರಾಮದ ಅಭಿಷೇಕ್ ಎಂಬಾತ ತನ್ನ ಬೈಕ್‌ನಲ್ಲಿ ಏಳೆಂಟು ತಿಂಗಳ ಹಸುಗೂಸು ಹಾಗೂ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ. ಬೈಕ್ ಸವಾರನಾಗಿದ್ದ ಅಭಿಷೇಕ್ ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಎ.ಎಸ್.ಐ. ರಘುಪ್ರಕಾಶ್ ಎಂಬುವವರು ಬೈಕ್ ಅಡ್ಡಗಟ್ಟಿ ಕೀ ಕಸಿದು ೫೦೦ ರೂ. ದಂಡ ಪಾವತಿಸಿ ಬೈಕ್ ತೆಗೆದುಕೊಂಡು ತೆರಳುವಂತೆ ತಾಕೀತು ಮಾಡಿದರು.
ಸಂಚಾರ ಪೊಲೀಸ್ ಅಧಿಕಾರಿಯ ಆದೇಶದಿಂದ ಭೀತಿಗೊಂಡ ಅಭಿಷೇಕ್ ಪತ್ನಿ ಹಾಗೂ ಮಗುವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾದಾಚಾರಿ ಮಾರ್ಗದಲ್ಲಿ ಕುಳ್ಳಿರಿಸಿ ವಿ.ವಿ. ರಸ್ತೆಯ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿಕೊಂಡು ಬಂದು ದಂಡ ಪಾವತಿಸಿ ಪೊಲೀಸರಿಂದ ಬೈಕ್ ಪಡೆದು ಪತ್ನಿ ಹಾಗೂ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬೈಕ್ ನಿಲ್ಲಿಸಿದ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ರಘುಪ್ರಕಾಶ್ ಎಂಬುವರು ಸಾರ್ವಜನಿಕರು ಹಾಗೂ ದಂಪತಿ ಮಾಡಿಕೊಂಡ ಮನವಿಗೆ ಕ್ಯಾರೆ ಎನ್ನದೇ ದಂಡ ಪಾವತಿಸಿ ಬೈಕ್ ಪಡೆಯಬೇಕೆಂದು ಅದೇಶಿಸಿದ ಪೊಲೀಸ್ ಅಧಿಕಾರಿ ಮಾನವೀಯತೆಯಿಂದ ವರ್ತಿಸಿ ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ತಿಳಿ ಹೇಳಿ ಬೈಕ್ ಸವಾರನನ್ನು ಕಳುಹಿಸಿದ್ದರೆ, ಇಲಾಖೆಯ ಗೌರವ ಹೆಚ್ಚಾಗುತ್ತಿರಲಿಲ್ಲವೇ, ಸಣ್ಣಪುಟ್ಟ ತಪ್ಪುಗಳಿಗೂ ನಿರ್ಧಯವಾಗಿ ನಡೆದುಕೊಳ್ಳುವ ಪೊಲೀಸ್ ಇಲಾಖೆಯ ಕೆಲ ಅಧಿಕಾರಿ, ಸಿಬ್ಬಂದಿಯ ನಡತೆ ಇಲಾಖೆ ಮೇಲಿನ ಹಿನ್ನಡೆಗೆ ಕಾರಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!