ಮಂಡ್ಯ: ಬೆಂಗಳೂರಿನ ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತವಾಗಿ ಸಿಕ್ಕ 10.50 ಲಕ್ಷ ನಗದು ಹಣದ ಸಮೇತ ಮಂಡ್ಯ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಜ.4 ರ ಸಂಜೆ 7 ಗಂಟೆಗೆ ಪಿಡಬ್ಲೂಡಿ ಎಇ ಜಗದೀಶ್ 10.50 ಲಕ್ಷ ರೂ. ಹಣದೊಂದಿಗೆ ವಿಧಾನ ಸೌಧಕ್ಕೆ ತೆರಳಿದ್ದು, ಅಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿದೆ. ಆ ಸಂದರ್ಭದಲ್ಲಿ ಪೊಲೀಸರು ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದಾಗ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು, ಹಣವನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಇದೀಗ ಹಣದ ಮೂಲ ಹುಡುಕುವಲ್ಲಿ ಪೊಲೀಸರು ಮುಂದಾಗಿದ್ದು, ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ತನಿಖೆ ನಡೆಸುತ್ತಿದ್ದಾರೆ.
ಸಚಿವರಿಗೆ ಲಂಚ?:
ವಿಧಾನಸೌಧದಲ್ಲಿ ಇಷ್ಟೊಂದು ದೊಡ್ಡ ಮೊತ್ತದೊಂದಿಗೆ ಹಣ ಸಿಕ್ಕಿದ್ದು ಸಹಜವಾಗಿಯೇ ಅನುಮಾನ ಮೂಡಿಸಿದೆ. ಈ ಹಿಂದೆಯೂ ಹಲವು ಬಾರಿ ವಿಧಾನಸೌಧದಲ್ಲಿ ಹಣ ಪತ್ತೆಯಾಗಿದೆ. ಆದರೆ ಯಾರಿಗೂ ಶಿಕ್ಷೆಯಾಗಿಲ್ಲ. ಈ ಹಣವನ್ನು ವರ್ಗಾವಣೆ ಹಿನ್ನೆಲೆಯಲ್ಲಿ ಸಚಿವರು, ಅಧಿಕಾರಿಗಳಿಗೆ ಲಂಚ ನೀಡಲು ತೆಗೆದುಕೊಂಡು ಹೋಗಿರುವ ಅನುಮಾನವಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಸತ್ಯ ಬಯಲು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವಿಧಾನಸೌಧದಲ್ಲಿ ಅನಧಿಕೃತವಾಗಿ ಹಣ ಸಾಗಿಸುತ್ತಿದ್ದ ಆರೋಪ : ಮಂಡ್ಯ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಂಧನ





