ನಿನ್ನೆ ಮದ್ದೂರು, ಇಂದು ನಾಗಮಂಗಲ, ಇನ್ನೂ ನಿಂತಿಲ್ಲ ಚಿರತೆ ಕಾರ್ಯಾಚರಣೆ
ನಾಗಮಂಗಲ: ಮದ್ದೂರು ತಾಲ್ಲೂಕಿನ ಕುಂದನಕುಪ್ಪೆ ಬಳಿ ಚಿರತೆ ಸೆರೆಯಾದ ಬೆನ್ನಿಗೇ ನಾಗಮಂಗಲದ ದೇವಲಾಪುರ ಹೋಬಳಿ ಮುತ್ಸಂದ್ರ ಗ್ರಾಮದ ಬಳಿ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸೆರೆ ಹಿಡಿದಿದ್ದಾರೆ. ಈ ನಡುವೆ ಶ್ರೀರಂಗಪಟ್ಟಣದ ಕೆ ಆರ್ ಎಸ್ ಬಳಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ನಾಗಮಂಗಲದ ಮುತ್ಸಂದ್ರ, ಗೊಲ್ಲರಹಳ್ಳಿ, ಕಸಲಗೆರೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಸಂಚರಿಸಿ ಕುರಿ, ಮೇಕೆಗಳನ್ನು ಹಿಡಿದು ಹೊತ್ತೋಯ್ಯುತ್ತಿದ್ದ ಚಿರತೆಯಿಂದಾಗಿ ಇಲ್ಲಿನ ಗ್ರಾಮಸ್ಥರು ರೋಸಿಹೋಗಿದ್ದರು.
ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆಯವರು 4ನೇ ತಾರೀಖಿನಂದು ಚಿರತೆ ಸೆರೆಗಾಗಿ ಬೋನಿಟ್ಟು ಕಾಯುತ್ತಿದ್ದರು.
ಸೋಮವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ಮುತ್ಸಂದ್ರ ಗ್ರಾಮದ ಬಳಿ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.
ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸತೀಶ್, ಉಪವಲಯ ಅರಣ್ಯಾಧಿಕಾರಿ ಮಂಜು, ಅರಣ್ಯ ರಕ್ಷಕರಾದ ರಂಗಸ್ವಾಮಿ, ಸಾಕಯ್ಯ, ಕ್ಷೇಮಾಭಿವೃದ್ದಿ ನೌಕರ ಪುಟ್ಟಸ್ವಾಮಿ ಭಾಗವಹಿಸಿದ್ದರು.




