Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಇಂದಿನಿಂದ ಮಹಾರಾಣಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಕಾರ್ಯಾರಂಭ

ಮೈಸೂರು: ಭಾರೀ ಮಳೆಯಿಂದಾಗಿ ಇತ್ತೀಚೆಗೆ ಕುಸಿದು ಬಿದ್ದ ಮಹಾರಾಣಿ ವಿಜ್ಞಾನ ಕಾಲೇಜಿನ ತರಗತಿಗಳು ಶುಕ್ರವಾರದಿಂದ ಹೊಸ ಕಟ್ಟಡದಲ್ಲಿ ಆರಂಭವಾಗಲಿವೆ.

ಪಾರಂಪರಿಕ ಕಟ್ಟಡ ಆಗಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಒಂದು ಭಾಗ ಇತ್ತೀಚೆಗೆ ಕುಸಿದು ಬಿದ್ದ ಪರಿಣಾಮ ಆ ಭಾಗದಲ್ಲಿದ್ದ ರಸಾಯನ ಶಾಸ್ತ್ರ ಪ್ರಯೋಗಾಲಯ ಸಂಪೂರ್ಣ ಹಾಳಾಗಿದ್ದರೆ, ಪ್ರಾಣಿಶಾಸ್ತ್ರ ವಿಭಾಗದ ಪ್ರಯೋಗಾಲಯ ಭಾಗಶಃ ಹಾನಿಗೊಳಗಾಗಿತ್ತು. ಹೀಗಾಗಿ ಅಂದಿನಿಂದ ಕಾಲೇಜಿನಲ್ಲಿ ಪ್ರಯೋಗಾಲಯ ನಡೆಯುತ್ತಿರಲಿಲ್ಲ. ಜತೆಗೆ ಏಕಾಏಕಿ ಕಟ್ಟಡ ಕುಸಿದುಬಿದ್ದ ಪರಿಣಾಮ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಭಯಭೀತರಾಗಿದ್ದರು. ದೀಪಾವಳಿ ರಜೆ ಮುಗಿಸಿ ಗುರುವಾರ ಕಾಲೇಜಿಗೆ ಹಾಜರಾದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ರವಿ ಅವರು ಧೈರ್ಯ ತುಂಬುವ ಸಲುವಾಗಿ ಸಭೆ ನಡೆಸಿ, ಗಾಳಿ ಸುದ್ದಿಗಳನ್ನು ನಂಬದಿರಿ.. ಕುತೂಹಲಕ್ಕೂ ಕುಸಿದು ಬಿದ್ದಿರುವ ಕಟ್ಟಡದ ಬಳಿ ಹೋಗದೆ ನಾಳೆಯಿಂದ ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯಲಿದ್ದು, ಆತಂಕ ಬಿಟ್ಟು ತರಗತಿಗಳಿಗೆ ಹಾಜರಾಗುವಂತೆ ಕಿವಿಮಾತು ಹೇಳಿದರು.

ನಿರಂತರ ಮಳೆಯಿಂದಾಗಿ ಶಿಥಿಲವಾಗಿದ್ದ ಕಾಲೇಜು ಕಟ್ಟಡ ಇತ್ತೀಚೆಗೆ ಹಾಡ ಹಗಲೇ ಕುಸಿದು ಬಿದ್ದಿದ್ದು ಆತಂಕಕ್ಕೆ ಕಾರಣವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಲಿತಾ ಕೆ. ನೇತೃತ್ವದ ನಾಲ್ವರು ಇಂಜಿನಿಯರುಗಳು, ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯರುಗಳ ತಂಡ ಕುಸಿದು ಬಿದ್ದ ಕಾಲೇಜು ಕಟ್ಟಡ ಬಳಕೆಗೆ ಯೋಗ್ಯವೇ? ಎಂಬುದನ್ನು ಪರಿಶೀಲಿಸಿ ಹೋಗಿದ್ದು, ಇನ್ನಷ್ಟೇ ವರದಿ ಸಲ್ಲಿಸಬೇಕಿದೆ.

ಈ ನಡುವೆ ಕುಸಿದು ಬಿದ್ದ ಪ್ರಯೋಗಾಲಗಳೆಡೆಗೆ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ತೆರಳದಂತೆ ಕಾರಿಡಾರ್ ನಲ್ಲಿ ಹಗ್ಗ ಕಟ್ಟಿ ನಿರ್ಬಂಧಿಸಲಾಗಿದೆ. ಶುಕ್ರವಾರದಿಂದ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಮೂರು ಅಂತಸ್ತುಗಳ ಹೊಸ ಕಟ್ಟಡದಲ್ಲಿನ ೨೦ ಕೊಠಡಿಗಳನ್ನು ಬಳಸಿಕೊಂಡು ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸದ್ಯ ಭಾಗಶಃ ಹಾನಿಯಾಗಿರುವ ಪ್ರಾಣಿಶಾಸ್ತ್ರ ವಿಭಾಗದ ಪ್ರಯೋಗಾಲಯದ ಕೆಲ ಪರಿಕರಗಳು ಬಳಕೆಗೆ ಸಿಗಲಿದ್ದರೆ, ರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯ ಸಂಪೂರ್ಣ ಕುಸಿದಿರುವುದರಿಂದ ಅಲ್ಲಿನ ಯಾವುದೇ ಪರಿಕರಗಳನ್ನೂ ಹೊರತೆಗೆಯಲಾಗಿಲ್ಲ. ಹೀಗಾಗಿ ರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯಕ್ಕೆ ಹೊಸದಾಗಿಯೇ ಪರಿಕರಗಳನ್ನು ಖರೀದಿಸಬೇಕಿದೆ.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!