Mysore
18
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಡಿಕೇರಿ : ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರ ಸ್ಮರಣೆ, ದೇಶಸೇವೆಗೆ ಮುಂದಾಗುವಂತೆ ಕರೆ

ಮಡಿಕೇರಿ: 1965 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ) ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಆಚರಿಸಲಾಯಿತು.

ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ಸಹಯೋಗದಲ್ಲಿ ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಗಣ್ಯರು, ನಿವೃತ್ತ ಯೋಧರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಏರ್ ಮಾರ್ಷಲ್ (ನಿವೃತ್ತ) ಕೊಡಂದೇರ ಕಾರ್ಯಪ್ಪ ಮಾತನಾಡಿ, ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಕೊಡವರು ಎನ್ನುವುದಕ್ಕಿಂತ ಮೊದಲು ಅವರು ಭಾರತೀಯರಾಗಿದ್ದಾರೆ. ದೇಶ ಸೇವೆ ಮೂಲಕ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಿವೃತ್ತ ಯೋಧರಿಗೆ ಹಾಗೂ ಮೃತಪಟ್ಟ ಯೋಧರ ಪತ್ನಿಯರಿಗೆ ಸರ್ಕಾರದಿಂದ ಸಹಕಾರ ನೀಡುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಜ್ಜಮಾಡ ಬಿ.ದೇವಯ್ಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕಟ್ಟಿ ಮಂದಯ್ಯ, ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರ ೫೭ನೇ ಪುಣ್ಯಸ್ಮರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ತಮ್ಮ ೩೨ನೇ ವಯಸ್ಸಿನಲ್ಲೇ ಅಜ್ಜಮಾಡ ಬಿ.ದೇವಯ್ಯ ಅವರು ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ ದೇಶದ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಅವರ ತ್ಯಾಗ ಬಲಿದಾನ ಅವಿಸ್ಮರಣೀಯ, ಮಹಾವೀರ ಚಕ್ರ ಪುರಸ್ಕೃತರಾಗಿರುವ ದೇವಯ್ಯ ಅವರ ಹೆಸರು ಚಿರಕಾಲ ಉಳಿಯಬೇಕು ಎಂದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ, ಯೋಧರ ಪೌರುಷ, ತ್ಯಾಗದ ಸ್ಮರಣೆ ಕೊಡಗಿಗೆ ಮಾತ್ರ ಸೀಮಿತವಾಗಬಾರದು. ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಸರ್ಕಾರದ ಕರ್ತವ್ಯವಾಗಬೇಕು. ಆದರೆ ಆಡಳಿತ ವ್ಯವಸ್ಥೆ ಜವಾಬ್ದಾರಿಯನ್ನು ಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಿ ಗೌರವ ನಮನ ಸಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ವೀರಶೂರರ ನಾಡು ಎಂದು ಕೀರ್ತಿ ಪಡೆದಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರಿಂದ ಕೊಡಗಿನ ಹೆಸರು ಪ್ರಪಂಚದಲ್ಲೇ ಗುರುತಿಸಿಕೊಳ್ಳುವಂತಾಗಿದೆ. ವೀರ ಸೇನಾನಿಗಳ ಆದರ್ಶವನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಎ.ಅಯ್ಯಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಶಾಖೆಯ ಅಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ ಮಾತನಾಡಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಅಜ್ಜಮಾಡ ಕುಟುಂಬದ ಅಧ್ಯಕ್ಷ ಲವ ಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಜಿ.ಬೋಪಯ್ಯ ಇತರರು ಪುಷ್ಪನಮನ ಸಲ್ಲಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ