ಮಡಿಕೇರಿ: ಅನಾರೋಗ್ಯದಿಂದ ನಿಧನರಾದ ಜಾರ್ಖಂಡ್‌ನ ರಾಂಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಡಗಿನ ಯೋಧ ಕೆ.ಕೆ. ಶಿಜು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಅರೆಸೇನಾ ಪಡೆ ಯೋಧ ಕೆ.ಕೆ. ಶಿಜು (೪೮) ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಹೃದಯಾಘಾತದಿಂದ ರಾಂಚಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮೃತದೇಹ ತಂದು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಕೊಡಗು ಜಿಲ್ಲೆಯ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುರ್ಕರಟ್ಟಿಗೆ ತರಲಾಯಿತು.
ಕಡಗದಾಳು ಸರ್ಕಾರಿ ವಿದ್ಯಾಸಂಸ್ಥೆ ಮುಂಭಾಗದಿಂದ ಮೃತದೇಹವನ್ನು ತೆರೆದ ವಾಹನದಲ್ಲಿರಿಸಿ ಗೌರವ ಸಲ್ಲಿಸಲಾಯಿತು. ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಸಾರ್ವಜನಿಕರು ರಸ್ತೆಯ ಎರಡು ಬದಿಯಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆ ಮಾಡುವುದರೊಂದಿಗೆ ಗೌರವ ಸಲ್ಲಿಸಿದರು.
ಮನೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಐಎಸ್‌ಎಫ್ ಯೋಧರು ಪುಷ್ಪಗುಚ್ಚ ಇಟ್ಟು, ಸಹದ್ಯೋಗಿಗೆ ಗೌರವ ಸಲ್ಲಿಸಿದರು. ಪೊಲೀಸ್ ತಂಡ ಮೂರು ಸುತ್ತು ಗಾಳಿ ಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಶಾಸಕ ಕೆ.ಜಿ. ಬೋಪಯ್ಯ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸಾರ್ವಜನಿಕರು, ಕುಟುಂಬಸ್ಥರು ಅಂತಿಮ ದರ್ಶನ ಪಡೆದ ಬಳಿಕ ಕತ್ತಲೆಕಾಡು ಹಿಂದೂ ರುಧ್ರಭೂಮಿಯಲ್ಲಿ ಮಲಯಾಳಿ ವಿಧಿ ವಿಧಾನ ದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.





