ಮೈಸೂರು: ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯಸರ್ಕಾರದ ದುರಾಡಳಿತ,ಭ್ರಷ್ಟಾಚಾರ,ವೈಫಲ್ಯಗಳನ್ನು ಜನರ ಮುಂದೆ ಇಡಲು ಡಿ.ಕೆ.ಶಿವಕುಮಾರ್ ಮತ್ತು ನನ್ನ ನೇತೃತ್ವದಲ್ಲಿ ಎರಡು ತಂಡದಲ್ಲಿ ರಾಜ್ಯದಾದ್ಯಂತ ಪ್ರವಾಸ ಆರಂಭಿಸಲಾಗುವುದು. ಯಾತ್ರೆ ಆರಂಭವಾಗುವ ಕುರಿತು ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದರು. ಯಾತ್ರೆಗೆ ಸಿದ್ಧಪಡಿಸುತ್ತಿರುವ ಬಸ್‌ನ ಕೆಲಸ ಮುಗಿದಿಲ್ಲ. ಪ್ರಾಯೋಗಿಕವಾಗಿ ನೋಡೋಣವೆಂದು ಕೋಲಾರಕ್ಕೆ ಹೋಗಿ ಬಂದಿದ್ದೇವು. ಯಾವಾಗ ಯಾತ್ರೆ ಪ್ರಾರಂಭವಾಗಲಿದೆ ಎನ್ನುವುದು ಹೇಳುತ್ತೇವೆ.ರಾಹುಕಾಲ,ಗುಳಿಕಾಲ ಎಂಬುದು ಇಲ್ಲ. ಎಲ್ಲ ದಿನಗಳು ಉತ್ತಮವಾಗಿದೆ ಎಂದು ನುಡಿದರು. ಕಾಂಗ್ರೆಸ್ ಪರವಾಗಿ ರಾಜ್ಯದಲ್ಲಿ ಅಲೆ ಉಂಟಾಗಿದೆ. ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಡಿಸೆಂಬರ್ ಮೊದಲ ವಾರದೊಳಗೆ ಪ್ರಕಟಿಸುತ್ತೇವೆ ಎಂದರು.
ಬಲವಂತ ಮತಾಂತರಕ್ಕೆ ವಿರೋಧ: ಬಲವಂತದ ಮತಾಂತರ,ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ನಮ್ಮದೂ ವಿರೋಧವಿದೆ. ಯಾವುದೇ ವ್ಯಕ್ತಿ ಸ್ವಯಂಪ್ರೇರಣೆಯಿಂದ ಯಾವ ಧರ್ಮವನ್ನಾದರೂ ಅನುಸರಿಸಬಹುದು.ಆದರೆ,ಬಲವಂತವಾಗಿ ಮತಾಂತರ ಮಾಡಬಾರದು. ಸುಪ್ರೀಂಕೋರ್ಟ್ ಹೇಳಿರುವುದನ್ನು ನಾನೂ ಹೇಳಿದ್ದೇನೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿ ಯಾರ್ಯಾರೋ ಕೊಡುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ. ಜನರ ಸಮಸ್ಯೆಗಳ ಬಗ್ಗೆ ಏನಾದರೂ ಇದ್ದರೆ ಪ್ರಶ್ನೆಗಳನ್ನು ಕೇಳಬಹುದು. ಬೇರೆಯವರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ಎಂಟು ಬಾರಿ ಜಯಗಳಿಸಿದ್ದೇನೆ. ಸೋಲು-ಗೆಲುವನ್ನು ತೀರ್ಮಾನ ಮಾಡುವುದು ಮತದಾರರು ಹೊರತು ನಾಯಕರಲ್ಲ ಎಂದು ತಿರುಗೇಟು ನೀಡಿದರು. ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಮೂರು ವರ್ಷಗಳ ಕಾಲ ಸುಮ್ಮನಿದ್ದು ಈಗ ನಮ್ಮ ಅವಧಿಯಲ್ಲೂ ಆಗಿತ್ತೆಂದು ಹೇಳುತ್ತಾರೆ. ನಮ್ಮ ಕಾಲದಲ್ಲೂ ಆಗಿದ್ದರೆ ಅದನ್ನು ಸೇರಿಸಿ ತನಿಖೆ ಮಾಡಿಸಲು ಅಭ್ಯಂತರವಿಲ್ಲ ಎಂದರು. ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮುಖಂಡರಾದ ಡಿ.ರವಿಶಂಕರ್, ಕೃಷ್ಣಕುಮಾರ್ ಸಾಗರ್,ಕೋಟೆಹುಂಡಿ ಮಹದೇವು,ಟಿ.ಬಿ.ಚಿಕ್ಕಣ್ಣ, ಕೆ.ಹರೀಶ್‌ಗೌಡ ಮೊದಲಾದವರು ಹಾಜರಿದ್ದರು.