ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳದಲ್ಲಿದ್ದವರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ ಪ್ರಸಂಗ ಮಂಗಳವಾರ ಸಂಜೆ ನಡೆದಿದೆ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಟಿ.ಎಂ.ಹೊಸೂರು ರಸ್ತೆಯಲ್ಲಿರುವ ಕರಿಘಟ್ಟ ನಾಲೆಯ ಸೇತುವೆ ಮೇಲೆ ಚಿರತೆ ಹಾದು ಹೋಗಿದೆ. ಗರುಡನ ಉಕ್ಕಡ ಕಡೆಯ ಅರಣ್ಯದ ಕಡೆಗೆ ದಪ್ಪ ಗಾತ್ರದ ಚಿರತೆ ಸಾಗಿತು ಎಂದು ಪ್ರತ್ಯಕ್ಷದರ್ಶಿ ಟಿ.ಎಂ.ಹೊಸೂರು ಗ್ರಾಮಸ್ಥರು ತಿಳಿಸಿದ್ದಾರೆ. ಟಿ.ಎಂ.ಹೊಸೂರು ಗೇಟ್ ಬಳಿ ಮೇಲಿಂದ ಮೇಲೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಇಲ್ಲಿಯ ಜನರು ಕೂಡ ಚಿರತೆಗೆ ಹೆದರಿ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.