ಸಮಯ ಪ್ರಜ್ಞೆಯಿಂದ ಉಳಿದ ಜೀವ
ಚಾಮರಾಜನಗರ: ತಾಲ್ಲೂಕಿನ ವೀರನಪುರ ಬಳಿ ಯಾವುದೋ ಪ್ರಾಣಿಗೆ ಹಾಕಿದ್ದ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ.
ಸುಮಾರು ಎರಡೂವರೆ ವರ್ಷದ ಹೆಣ್ಣು ಚಿರತೆಯ ಸೊಂಟಕ್ಕೆ ತಂತಿ ಬಿಗಿದು ಕೊಂಡಿದ್ದನ್ನು ಹತ್ತಿರದಿಂದ ಕಂಡ ರೈತರೊಬ್ಬರು ವಿಷಯ ಮುಟ್ಟಿಸಿದ್ದು ಅರಣ್ಯಾಧಿಕಾರಿಗಳು ಸಕಾಲಕ್ಕೆ ತೆರಳಿ ಅದರ ಜೀವ ಉಳಿಸಿದ್ದಾರೆ.
ನಗರ-ಗುಂಡ್ಲುಪೇಟೆ ಮಾರ್ಗದಲ್ಲಿ ಬಣ್ಣಾರಿ ಅಮ್ಮಾನ್ ದೇವಸ್ಥಾನ ಇದ್ದು ಅದರ ಎದುರು ಇರುವ ಕರಿಕಲ್ಲು ಕ್ವಾರಿ ಬಳಿಯ ಹಳ್ಳದಲ್ಲಿ ಚಿರತೆ ಉರುಳಿಗೆ ಸಿಲುಕಿದ್ದು ಗೊತ್ತಾಗಿ ಮಧ್ಯಾಹ್ನ ರಕ್ಷಣೆ ಮಾಡಲಾಗಿದೆ.
ಮೇಲ್ನೋಟಕ್ಕೆ ಹಂದಿಗೆ ಹಾಕಿದ್ದ ಉರುಳಿನಂತೆ ಕಾಣುತ್ತದೆಯಾದರೂ ಇದು ಪ್ರಾಣಿಗಳ ಬೇಟೆಯಾಡುವ ಉದ್ದೇಶದಿಂದ ನುರಿತವರು ಎಸಗಿರುವ ಕೃತ್ಯವೇ ಎಂಬುದರ ಬಗ್ಗೆಯೂ ಇಲಾಖೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ.
ಬಿ ಆರ್ ಟಿ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್, ಎಸಿಎಫ್ ಸುರೇಶ್ , ಆರ್ ಎಫ್ ಒ ವಿನೋದ್ ಗೌಡ ಮತ್ತು ಸಿಬ್ಬಂದಿ ವೈದ್ಯರಾದ ಮುಜೀಬ್,ವಸೀಂ ಅವರೊಂದಿಗೆ ಧಾವಿಸಿಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದರು.ನಂತರ ಅದರ ದೇಹ ಪರಿಶೀಲಿಸಿದಾಗ ಯಾವುದೇ ಗಾಯಗಳಾಗಿರಲಿಲ್ಲ.
ಈ ಚಿರತೆಯನ್ನು ಮತ್ತೆ ಕಾಡಿಗೆ ಬಿಡಬೇಕೆ ಅಥವಾ ಮೈಸೂರು ಮೃಗಾಲಯಕ್ಕೆ ಕೊಂಡೊಯ್ಯಬೇಕೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಿಚಾರವಾಗಿ ಹಿರಿಯ ಅಧಿಕಾರಿಗಳು ಹೇಗೆ ಹೇಳುತ್ತಾರೆ ಹಾಗೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಜ್ಞೆ ಬಂದ ನಂತರ ಚಿರತೆಯನ್ನುನಲ್ಲೂರು ಅರಣ್ಯ ಕಚೇರಿಯಲ್ಲಿ ಬೋನಿನಲ್ಲಿ ಇರಿಸಲಾಗಿತ್ತು.





