Mysore
18
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

CFTRI ಕ್ಯಾಂಪಸ್‌ ನಲ್ಲಿ ಚಿರತೆಗೆ ಶೋಧ, ಪುನುಗು ಬೆಕ್ಕು ಪ್ರತ್ಯಕ್ಷ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾಲಯ( ಸಿಎಫ್‌ ಟಿಆರ್‌ಐ )ದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಗುರುವಾರವೂ ಮುಂದುವರೆದಿದ್ದು, ಚಿರತೆಯ ಯಾವುದೇ ಕುರುಹು ಇನ್ನೂ ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸಿಎಫ್‌ ಟಿಆರ್‌ಐ ಶಾಲೆಗೆ ಗುರುವಾರವೂ ರಜೆ ನೀಡಲಾಗಿತ್ತು.
ಸಿಎ-ಟಿಆರ್‌ಐ ಆವರಣದಲ್ಲಿ ಯಾವುದೇ ಸಣ್ಣ ಪ್ರಾಣಿ-ಪಕ್ಷಿಗಳು ಸದ್ದು ಮಾಡಿದರೂ ಅದು ಚಿರತೆಯೇ ಎನ್ನುವ ಮಟ್ಟಿಗೆ ಭೀತಿ ನಿರ್ಮಾಣವಾಗಿದೆ. ಆದರೂ ಇಲ್ಲಿನ ನಿವಾಸಿಗಳು, ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ನಿರಾತಂಕವಾಗಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.

ಕಾಣಿಸದ ಚಿರತೆ: ಮಂಗಳವಾರ ತಡರಾತ್ರಿ ಸಿಎ-ಫ್‌ ಟಿಆರ್‌ಐ ಶಾಲೆಯ ಮೈದಾನದ ಪಕ್ಕದಲ್ಲಿ ಚಿರತೆಯೊಂದು ಓಡಾಡುವುದನ್ನು ಭದ್ರತಾ ಸಿಬ್ಬಂದಿ ಪ್ರಭಾಕರ್ ಎಂಬವರು ನೋಡಿ ಮಾಹಿತಿ ನೀಡಿದ್ದರು. ಬುಧವಾರ ಮುಂಜಾನೆಯೇ ಈ ಮಾಹಿತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಲಾಗಿದ್ದು, ತಕ್ಷಣ ಅವರು ಕಾರ್ಯಾಚರಣೆ ಆರಂಭಿಸಿದ್ದರು. ಬುಧವಾರ ದಿನವಿಡೀ ಆವರಣದಲ್ಲಿ ಶೋಧ ನಡೆಸಿದ ಅರಣ್ಯ ಇಲಾಖೆ ಮತ್ತು ಸಿಎ-ಫ್‌ ಟಿಆರ್‌ಐ ಭದ್ರತಾ ಸಿಬ್ಬಂದಿಗೆ ಚಿರತೆ ಕಂಡು ಬಂದಿಲ್ಲ. ಚಿರತೆ ಸೆರೆಗೆ ಬೋನು ಕೂಡ ಇಡಲಾಗಿದ್ದು, ರಾತ್ರಿ ವೇಳೆ ದೃಶ್ಯ ಸೆರೆ ಹಿಡಿಯುವ 10 ಅತ್ಯಾಧುನಿಕ ಸಿಸಿ ಕೆಮರಾಗಳನ್ನು ಅರಣ್ಯ ಇಲಾಖೆ ವತಿಯಿಂದ ಆವರಣದಲ್ಲಿ ಅಳವಡಿಸಲಾಗಿದೆ. ಈ ಕ್ಯಾಮರಾಗಳಲ್ಲಿ ಚಿರತೆ ಚಲನ-ವಲನವಿರುವ ದೃಶ್ಯಗಳು ಸೆರೆಯಾದರೆ, ತಕ್ಷಣ ಮೆಸೇಜ್ ಬರಲಿದೆ. ಇನ್ನು ಈ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಚಿರತೆಯ ಸಣ್ಣ ಕುರುಹುಗಳು ಕಂಡು ಬಂದಿಲ್ಲ. ಚಿರತೆ ಕಾಣಿಸಿಕೊಂಡು, ಬೋನು ಇಡಲಾಗಿರುವ ಜಾಗಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯ ಹೊರತಾಗಿ ಯಾರೂ ಹೋಗದಂತೆ ಬ್ಯಾರಿಕೇಡ್ ಹಾಕಲಾಗಿದೆ.

ಚಿರತೆ ಬದಲು ಪುನುಗು ಬೆಕ್ಕು ಪ್ರತ್ಯಕ್ಷ

ಬುಧವಾರ ರಾತ್ರಿ 8.30 ರ ಸುಮಾರಿನಲ್ಲಿ ಸಿಎಫ್‌ -ಟಿಆರ್‌ಐ ಆವರಣಕ್ಕೆ ಹೊಂದಿಕೊಂಡಂತೆ ಇರುವ ನ್ಯಾಯಾಧೀಶರ ಕ್ವಾರ್ಟರ್ಸ್‌ ಬಳಿ ಯಾವುದೋ ಪ್ರಾಣಿ ಸದ್ದು ಮಾಡುತ್ತಾ, ಓಡಾಡಿದಂತೆ ಕಂಡು ಬಂದಿದ್ದು ಸಿಎಫ್‌ -ಟಿಆರ್‌ಐ ಭದ್ರತಾ ಸಿಬ್ಬಂದಿಯೊಬ್ಬರು ತಕ್ಷಣ ಅಲ್ಲಿಯೇ ಇದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅದು ಪುನುಗು ಬೆಕ್ಕು ಎಂಬುದು ತಿಳಿದು ಬಂದಿದೆ.

ರಾತ್ರಿ ವೇಳೆ ದೃಶ್ಯ ಸೆರೆ ಹಿಡಿಯುವ 10 ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಸಿಸಿಟಿವಿ -ಪೂಟೇಜ್‌ಗಳನ್ನು ಪರಿಶೀಲಿಸಲಾಗಿದ್ದು, ಇದುವರೆಗೂ ಯಾವುದೇ ವನ್ಯ ಪ್ರಾಣಿಗಳ ಚಲನವಲನ ಕಂಡುಬಂದಿಲ್ಲ. ರಾತ್ರಿಯಿಡೀ ನಮ್ಮ ಸಿಬ್ಬಂದಿ ಆವರಣದಲ್ಲಿಯೇ ಇದ್ದು ವಾಚ್ ಮಾಡಿದ್ದಾರೆ. ನಾನು ಕೂಡ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದೇನೆ. ಚಿರತೆಯ ಹೆಜ್ಜೆ ಗುರುತುಗಳು ಕೂಡ ಕಂಡು ಬಂದಿಲ್ಲ. ನ್ಯಾಯಾಧೀಶರ ವಸತಿ ಗೃಹದ ಬಳಿ ಯಾವುದೋ ಪ್ರಾಣಿ ಸದ್ದು ಮಾಡಿತು ಎಂದರು. ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಪುನುಗು ಬೆಕ್ಕು ಎಂಬುದು ತಿಳಿದು ಬಂದಿದೆ. ಇನ್ನೂ ಹೆಚ್ಚುವರಿ 10 ಸಿಸಿ ಕೆಮೆರಾಗಳನ್ನು ಅಳವಡಿಸಲಾಗುವುದು. ಅಗತ್ಯ ಕಂಡು ಬಂದರೆ ಮಾತ್ರ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

– ಡಿ. ಮಹೇಶ್ ಕುಮಾರ್, ಡಿಸಿಎ- ಮೈಸೂರು.


ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ನೀಡಲಾಗಿದೆ. ಕೆಲಸದ ಹಿನ್ನೆಲೆಯಲ್ಲಿ ಮಾಮೂಲಿಯಂತೆ ಓಡಾಡುತ್ತಿದ್ದಾರೆ. ಅಂತಹ ಆತಂಕವೇನೂ ಕಾಣುತ್ತಿಲ್ಲ.
-ವಿಜಯ್, ಸಹಾಯಕ ಸಿಬ್ಬಂದಿ, ಸಿಎಫ್‌ -ಟಿಆರ್‌ಐ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!