ಹನಗೋಡು: ಹಾಡಹಗಲೇ ಮನೆ ಬಳಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಬೀತರನ್ನಾಗಿಸಿರುವ ಘಟನೆ ಹಳೇವಾರಂಚಿ ಗ್ರಾಮದಲ್ಲಿ ನಡೆದಿದೆ.
ಹನಗೋಡು ಹೋಬಳಿಯ ಹಳೆವಾರಂಚಿ ಗ್ರಾಮದ ರವಿ ಎಂಬವರ ಮನೆ ಪಕ್ಕದಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿದ್ದು, ರವಿಯವರ ಪತ್ನಿ ಕವಿತಾ ಎಂಬವರು ಮನೆ ಮುಂದಿನ ಜಮೀನಿಗೆ ತೆರಳುತ್ತಿದ್ದ ವೇಳೆ ಚಿರತೆ ಕಂಡು ಗಾಬರಿಗೊಂಡಿದ್ದಾರೆ.
ಈ ವೇಳೆ ಗ್ರಾಮಸ್ಥರು ವಿಷಯ ತಿಳಿದು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಮತ್ತೆ ರಾತ್ರಿ ತೆಂಗಿನ ಮರದ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮೊಬೈಲ್ ಮೂಲಕ ಚಿರತೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದ್ದು, ಜನರು ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ಸರೆ ಹಿಡಿದು ಗ್ರಾಮಸ್ಥರಲ್ಲಿನ ಆತಂಕವನ್ನು ದೂರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೆರೆ ಹಿಡಿಯಲು ಕ್ರಮ: ಈಗಾಗಲೇ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಲಾಗುವುದು. ಜನರು ಎಚ್ಚರಿಕೆಯಿಂದ ಓಡಾಡಬೇಕೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುವಾರ್ ಮನವಿ ವಾಡಿದ್ದಾರೆ.




