Mysore
26
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಚಿರತೆ ದಾಳಿ : ಗಾಯಗೊಂಡರೂ ಮೊಬೈಲ್‌ನಲ್ಲಿ ಹೊಡೆದು ಧೈರ್ಯದಿಂದ ಹಿಮ್ಮೆಟಿಸಿದ ಯುವಕ

ತಿ.ನರಸೀಪುರ: ತಿಂಗಳ ಅಂತರದಲ್ಲೇ ಚಿರತೆ ದಾಳಿಯಿಂದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗಳು ಮಾಸುವ ಮುನ್ನವೇ ತಿ.ನರಸೀಪುರ ತಾಲ್ಲೂಕಿನಲ್ಲಿ ಮತ್ತೆ ಚಿರತೆ ದಾಳಿ ಮಾಡಿದ್ದು, ಹೋರಾಟ ಮಾಡಿ ಯುವಕ ಪಾರಾಗಿದ್ದಾನೆ.

ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ನುಗ್ಗೆಹಳ್ಳಿಕೊಪ್ಪಲು ಗ್ರಾಮದಲ್ಲಿ ಭಾನುವಾರ ಸಂಜೆ ೫.೩೦ರ ಹೊತ್ತಿಗೆ ಘಟನೆ ನಡೆದಿದ್ದು, ಗಾಯಗೊಂಡಿರುವ ಲೋಕೇಶ್(೩೦) ನನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿ.ನರಸೀಪುರ ಹಾಗೂ ಮಳವಳ್ಳಿ ತಾಲ್ಲೂಕು ಗಡಿಯಲ್ಲಿ ಬರುವ ಈ ಹಳ್ಳಿಯೂ ಸೇರಿದಂತೆ ಏಳೆಂಟು ಹಳ್ಳಿಗಳಲ್ಲಿ ಚಿರತೆ ಉಪಟಳ ಕೆಲ ದಿನಗಳಿಂದ ಹೆಚ್ಚಿದ್ದು, ಶನಿವಾರವೂ ಸ್ಥಳೀಯರಿಗೆ ಕಾಣಿಸಿಕೊಂಡಿತ್ತು. ಮರು ದಿನವೇ ವ್ಯಕ್ತಿ ಮೇಲೆ ದಾಳಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಚಿರತೆ ದಾಳಿ ಕಾರಣದಿಂದ ಈ ಭಾಗದಲ್ಲಿ ಬೋನು ಇರಿಸಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಳಸಿ ತುರ್ತು ಕಾರ್ಯಾಚರಣೆ ಕೈಗೊಂಡಿದೆ.

ಲೋಕೇಶ್ ಬೈಕ್‌ನಲ್ಲಿ ಹೆಗ್ಗೂರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ರಸ್ತೆ ಕಡೆಗೆ ನುಗ್ಗಿದ ಚಿರತೆ ಏಕಾಏಕಿ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಲೋಕೇಶ್ ಮೊಬೈಲ್‌ನಲ್ಲಿಯೇ ಚಿರತೆಗೆ ಹೊಡೆದಿದ್ದು, ಅದನ್ನು ಅಲ್ಲಿಂದಲೇ ದೂಡಿದ್ದಾನೆ. ಈ ವೇಳೆಗೆ ಕತ್ತು, ಭುಜ ಹಾಗೂ ಹೊಟ್ಟೆ ಭಾಗಕ್ಕೆ ಏಟು ಬಿದ್ದಿದ್ದು, ಚಿರತೆ ಅಲ್ಲಿಂದ ಪರಾರಿಯಾಗಿದೆ. ಕೂಡಲೇ ಮನೆಯವರಿಗೆ ಹಾಗೂ ಅರಣ್ಯ ಇಲಾಖೆಯವರಿಗೆ ಲೋಕೇಶ್ ಮಾಹಿತಿ ನೀಡಿದ್ದಾನೆ.ಗಾಯಗೊಂಡಿರುವ ಲೋಕೇಶ್‌ಗೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲೋಕೇಶ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ಧಾರೆ.

ಕೆಲ ದಿನಗಳಿಂದ ನುಗ್ಗಹಳ್ಳಿ ಕೊಪ್ಪಲು, ಹೆಗ್ಗೂರು, ಅಂಕನಹಳ್ಳಿ, ಮಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಕ್ಕೂ ಗ್ರಾಮದಲ್ಲಿ ಚಿರತೆ ಕಾಟ ಇರುವ ಬಗ್ಗೆ ದೂರು ಇತ್ತು. ಎರಡು ದಿನದ ಹಿಂದೆ ಕುರಿಯೊಂದನ್ನು ಚಿರತೆ ಹೊತ್ತೊಯ್ದ ಬಗ್ಗೆ ದೂರು ಬಂದಿದ್ದರಿಂದ ಬೋನು ಇರಿಸಿದ್ದೆವು. ಜನರೂ ಚಿರತೆ ಇರುವುದನ್ನು ನೋಡಿದ್ದು, ನಿನ್ನೆಯಷ್ಟೇ ಚಿರತೆ ನೋಡಿದ್ದ ಲೋಕೇಶ್ ಮೇಲೆ ದಾಳಿ ಮಾಡಿದೆ. ಗಾಯಗೊಂಡಿರುವ ಲೋಕೇಶ್‌ಗೆ ಚಿಕಿತ್ಸೆ ನೀಡಲಾಗಿದ್ದು, ಈ ಭಾಗದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಎಸಿಎಫ್ ಲಕ್ಷ್ಮಿಕಾಂತ ಆಂದೋಲನಕ್ಕೆ ತಿಳಿಸಿದರು.

ತಿ.ನರಸೀಪುರ ತಾಲ್ಲೂಕಿನ ನಾಲ್ಕೈದು ಭಾಗಗಳಲ್ಲಿ ಚಿರತೆ ಉಪಟಳ ಇದ್ದು, ಎಂಎಲ್ ಹುಂಡಿ ಹಾಗೂ ಕೆಬ್ಬೆಹುಂಡಿ ಭಾಗದಲ್ಲಿ ಚಿರತೆ ದಾಳಿ ಮಾಡಿ ಇಬ್ಬರನ್ನು ಸಾಯಿಸಿದ್ದರಿಂದ ಈಗಾಗಲೇ ಮೈಸೂರು ವಿಭಾಗದ ಅರಣ್ಯ ತಂಡ ತಾಲ್ಲೂಕಿನಲ್ಲಿಯೇ ಬೀಡುಬಿಟ್ಟಿದೆ. ಇದರ ನಡುವೆ ದಾಳಿ ಮಾಡಿರುವುದರಿಂದ ಜನರಿಗೆ ಚಿರತೆ ಭಯ ಇನ್ನಷ್ಟು ಹೆಚ್ಚಿದೆ.


ತಿ.ನರಸೀಪುರ ತಾಲ್ಲೂಕಿನಲ್ಲಿ ಈ ಬಾರಿ ಚಿರತೆ ತೊಂದರೆ ಹೆಚ್ಚಾಗಿದೆ. ಲೋಕೇಶ್ ಎಂಬಾತನ ಮೇಲೆ ಚಿರತೆ ಮಾಡಿ ಗಾಯಗೊಳಿಸಿದೆ. ಆತನೂ ಚಿರತೆ ಹಿಮ್ಮೆಟ್ಟಿಸಿ ಪಾರಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿರತೆ ಸೆರೆಗೆ ಇಲಾಖೆ ಕಾರ್ಯಾಚರಣೆ ಮುಂದುವರಿದಿದೆ.

-ಲಕ್ಷ್ಮಿಕಾಂತ್, ಎಸಿಎಫ್, ಮೈಸೂರು


ದಾಳಿ ಎಲ್ಲೆಲ್ಲಿ?

ಅಕ್ಟೋಬರ್ ೩೧ ಎಂಎಲ್‌ಹುಂಡಿಯಲ್ಲಿ ಮಂಜುನಾಥ್ ಸಾವು

ಡಿಸೆಂಬರ್ ೧ರಂದು ಎಸ್ ಕೆಬ್ಬೆಹುಂಡಿಯಲ್ಲಿ ಮೇಘನಾ ಸಾವು

ಡಿಸೆಂಬರ್ ೧೮ ರಂದು ನುಗ್ಗೆಹಳ್ಳಿ ಕೊಪ್ಪಲಿನಲ್ಲಿ ಲೋಕೇಶ್ ಗಾಯ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!