Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾತ್ರೋ ರಾತ್ರಿ ಕೆಂಪಾಯಿತು ಬಸ್ ತಂಗುದಾಣದ ಬಣ್ಣ

ಸಂಸದ ಪ್ರತಾಪ್‌ – ಶಾಸಕ ರಾಮದಾಸ್‌ ಜಟಾಪಟಿಗೆ ಹೊಸ ಟ್ವಿಸ್ಟ್‌

ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಸ್.ಎ.ರಾಮದಾಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿರುವ ಮೈಸೂರು -ನಂಜನಗೂಡು ರಸ್ತೆಯ ಜೆಎಸ್‌ಎಸ್ ಕಾಲೇಜು ಬಸ್ ತಂಗುದಾಣ ರಾತ್ರಿ ಬಣ್ಣ ಬದಲಾಯಿಸಿದೆ.

ಬಸ್ ನಿಲ್ದಾಣದ ಮೇಲೆ ನಿರ್ಮಿಸಿರುವ ಗುಂಬಜ್ ಮಾದರಿಯ ಆಕೃತಿಗೆ ಸಂಸದ ಪ್ರತಾಪ್‌ ಆಕ್ಷೇಪ ವ್ಯಕ್ತಪಡಿಸಿದ ದಿನದಿಂದ ಈ ನಿಲ್ದಾಣಕ್ಕೆ ಹೊಸ ಆಕೃತಿ, ಬಣ್ಣಗಳ ಸೇರ್ಪಡೆಯಾಗುತ್ತಿದ್ದು ವಿವಾದವೂ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.

ಗೋಪುರಕ್ಕೆ ಬಳಿದಿದ್ದ ಗೋಲ್ಡ್ ಕಲರ್ ಮೇಲೆ ರಾತ್ರೋರಾತ್ರಿ ಕಡು ಕೆಂಪು ಬಣ್ಣವನ್ನು ಬಳಿಯಲಾಗಿದ್ದು ಗುರುವಾರ ಬೆಳಿಗ್ಗೆ ನೋಡುಗರಿಗೆ ಹೊಸ ಅಚ್ಚರಿ ಕಾದಿತ್ತು. ಮಂಗಳವಾರ ಈ ಬಸ್‌ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರ ಭಾವಚಿತ್ರವನ್ನು ಹಾಕಲಾಗಿತ್ತು. ಈಗ ಗೋಪುರಕ್ಕೆ ಬಳಿದಿದ್ದ ಗೋಲ್ಡ್ ಕಲರ್ ಬದಲಿಗೆ ಕೆಂಪು ಬಣ್ಣವನ್ನು ಬಳಿಯಲಾಗಿದೆ.

ಸಂಸದರು ಈ ನಿಲ್ದಾಣ ಗುಂಬಜ್‌ ಮಾದರಿಯನ್ನು ಹೋಲುತ್ತಿದ್ದು, ಇದನ್ನು ತೆರವುಗೊಳಿಸದೇ ಹೋದರೆ, ನಾನೇ ಬುಲ್ಡೋಜರ್‌ ತಂದು ಕೆಡಗುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಿಗೇ ಗುಂಬಜ್‌ ಆಕೃತಿಯ ಮೇಲೆ ಕಳಸ ಜೋಡಿಸಲಾಗಿತ್ತು. ಅದರ ಮರುದಿನ ಗಣ್ಯರ ಭಾವ ಚಿತ್ರ ಅಳವಡಿಸಿ ಗೋಲ್ಡ್‌ ಕಲರ್‌ ಪೆಯಿಂಟ್‌ ಬಳಿಯಲಾಗಿತ್ತು. ಈಗ ಗೋಲ್ಡ್‌ ಕಲರ್‌ ಬದಲು ಕೆಂಪು ಕಲರ್‌ ಪೆಯಿಂಟ್‌ ಬಳಿಯಲಾಗಿದೆ.

ಗುರುವಾರ ಕೂಡ ಕಾರ್ಮಿಕರಿಬ್ಬರು ನಿಲ್ದಾಣದ ಮುಂಭಾಗ ಸಣ್ಣಪುಟ್ಟ ಕಾಮಗಾರಿಯನ್ನು ಮಾಡುತ್ತಿದ್ದರು. ಪೊಲೀಸರು ಕಾಮಗಾರಿ ಮಾಡದಂತೆ ಸೂಚನೆ ನೀಡಿದರೂ ಗುತ್ತಿಗೆದಾರರ ಕಡೆಯವರು,””ನಮ್ಮ ಕೆಲಸವನ್ನು ನಾವು ಮುಗಿಸಿಬಿಡುತ್ತೇವೆ. ಮುಂಭಾಗ ಗಾರೆ ಹಾಕಿ ಬಣ್ಣ ಬಳಿದರೆ ನಮ್ಮ ಕೆಲಸ ಮುಗಿಯಲಿದೆʼʼ ಎನ್ನುವ ಮೂಲಕ ಕೆಲಸ ಮುಂದುವರಿಸಿದರು.

ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ರಸ್ತೆಯಲ್ಲಿ ಯಾವುದೇ ಅನುಮತಿ ಪಡೆಯದೆ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ ಎಂದು ನೋಟಿಸ್ ನೀಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಈ ನಿಲ್ದಾಣದ ಫೋಟೋ ತೆಗೆದು ವಿಡಿಯೋ ಚಿತ್ರೀಕರಣ ಮಾಡಿಸಿದ್ದಾರೆ.

ಜೆಎಸ್‌ಎಸ್ ಕಾಲೇಜಿನ ಕಾಂಪೌಂಡ್‌ಗೆ ನಿರ್ಮಿಸಿರುವ ಜಾಗದ ಪ್ರದೇಶ, ನಂಜನಗೂಡು ಮಾರ್ಗಕ್ಕೆ ಹಾದು ಹೋಗಿರುವ ಮಾರ್ಗದ ಕಡೆಗೆ ತಿರುಗುವ ಜಾಗವನ್ನು ವಿಡಿಯೋ ಚಿತ್ರೀಕರಣ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು,ಇಬ್ಬರು ಪೊಲೀಸರನ್ನು ಹಾಕಲಾಗಿದೆ.

 

ನಿಮ್ಮಲ್ಲಿ ಕೈಮುಗಿಯುವೆ,ನನ್ನನ್ನು ಬಿಟ್ಟು ಬಿಡಿ: ರಾಮದಾಸ್

ಈ ನಡುವೆ ವಿವಾದಕ್ಕೆ ಸಂಬಂಧಿಸಿ ಗುರುವಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್, ನಿಮ್ಮಲ್ಲಿ ಕೈ ಮುಗಿಯುವೆ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಎಂದರು.

“” ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆʼʼ ಎಂದರು. ನನ್ನನ್ನು ಪಕ್ಷದಿಂದ ಹೊರ ಹಾಕಲು ಕಿರುಕುಳ ನೀಡಲಾಗುತ್ತಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿದ ಅವರು, ಕಳೆದ 30 ವರ್ಷಗಳಿಂದ ಬಿಜೆಪಿಯ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿದ್ದರಿಂದ ಹತ್ತು ಜನರು ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಪ್ರಶ್ನೆ ಮಾಡದೆ ಬಿಟ್ಟುಬಿಡಿ ಎಂದ ಅವರು ಪರೋಕ್ಷವಾಗಿ ಸಂಸದರ ವಿರುದ್ಧ ಹರಿ ಹಾಯ್ದರು.

“” ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ.ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್, ಸ್ಮಶಾನ,ರಸ್ತೆಗಳ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಏನಾದರೂ ಸಾಧನೆ ಮಾಡಬೇಕು ಎನ್ನುವುದು ಗುರಿಯಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಯಾವುದೇ ವರದಿ ಕೊಟ್ಟರೂ ಅದಕ್ಕೆ ತಲೆಬಾಗುತ್ತೇನೆʼʼ ಎಂದು ನುಡಿದರು.

ಪಕ್ಷದ ಹಿರಿಯ ನಾಯಕರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಎಲೆತೋಟದ ಬಳಿ ನಿರ್ಮಿಸುತ್ತಿರುವ ಮಾದರಿಯಲ್ಲಿ 11 ಕಡೆಗಳಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡುತ್ತೇವೆ. ಜನರಿಗೆ ಒಳ್ಳೆಯದಾಗಬೇಕು ಎನ್ನುವುದು ನಮ್ಮ ಉದ್ದೇಶ ಹೊರತು ಬೇರೇನೂ ಇಲ್ಲ ಎಂದು ಮಾರ್ಮಿಕವಾಗಿ ಪ್ರತಾಪ್ ಸಿಂಹ ಅವರಿಗೆ ಕುಟುಕಿದರು.

 

ತೆರವು ಆಗಲೇಬೇಕು : ಪ್ರತಾಪ್ ಸಿಂಹ ಗುಡುಗು

ಅನಧಿಕೃತ ಗುಂಬಜ್ ಮಾದರಿಯ ಗೋಪುರ ತೆರವು ಆಗಲೇಬೇಕಿದೆ ಮೈಸೂರು: ನಗರದ ಎಲೆತೋಟದಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣದ ವಿಚಾರದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ(ಕೆಆರ್‌ಐಡಿಎಲ್)ಶಾಸಕ ಎಸ್.ಎ.ರಾಮದಾಸ್ ಅವರ ಆಪ್ತರೊಬ್ಬರು ನಿರ್ದೇಶನ ಕೊಟ್ಟಿದ್ದಾರೆ.ಸಂಸದನಾಗಿರುವ ನನಗೆ ಆ ಅಧಿಕಾರವಿಲ್ಲ. ಆದರೆ, ಈ ವಿಚಾರದಲ್ಲಿ ಶಾಸಕರ ಆಪ್ತರು ಕೆಆರ್‌ಐಡಿಎಲ್‌ಗೆ ನಿರ್ದೇಶನ ಕೊಡಲು ಅಧಿಕಾರ ಕೊಟ್ಟವರು ಯಾರು ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏನೇ ಆಗಬೇಕಾದರೂ ಜಿಲ್ಲಾಧಿಕಾರಿ ಮುಖಾಂತರ ನಿಯಮಾನುಸಾರ ಆಗಬೇಕು. ಆದರೆ, ಶಾಸಕರ ಆಪ್ತರೊಬ್ಬರು ನಿರ್ದೇಶನ ನೀಡುವ ಮೂಲಕ ವಿನ್ಯಾಸ ಬದಲಿಸುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಿಲ್ದಾಣದ ವಿವಾದ ಮುಂದಿಟ್ಟುಕೊಂಡು ನನಗೆ ಪಕ್ಷದೊಳಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “” ಅವರು (ರಾಮದಾಸ್)ನಮ್ಮ ಪಕ್ಷದ ಹಿರಿಯ ಶಾಸಕರಾಗಿದ್ದಾರೆ. ಪ್ರಧಾನಿ ಮೋದಿ ಅವರಿಂದ ಆತ್ಮೀಯತೆಯಿಂದ ಮೈಗೆ ಗುದ್ದಿಸಿಕೊಂಡಿರುವ ರಾಮದಾಸ್‌ರಿಗೆ ಕಿರುಕುಳ ನೀಡುವಷ್ಟು ದೊಡ್ಡವನು ನಾನಲ್ಲ.ಯಾರು ಕಿರುಕುಳ ನೀಡಿದ್ದಾರೆ ಅವರನ್ನೇ ಕೇಳಿ ʼʼ ಎಂದು ಪ್ರಶ್ನಿಸಿದರು.

ಮೂಲ ವಿನ್ಯಾಸಕ್ಕೆ ನಿರ್ಮಿಸಲಿ

ಬಸ್ ನಿಲ್ದಾಣಗಳನ್ನು ಮೂಲ ವಿನ್ಯಾಸಕ್ಕೆ ಅನುಗುಣವಾಗಿ ನಿರ್ಮಿಸಬೇಕು ಎಂಬುದು ನನ್ನ ಆಶಯವಾಗಿದೆ. ಈ ವಿಚಾರದಲ್ಲಿ ಯಾವುದೇ ಅನಗತ್ಯ, ಗೊಂದಲವನ್ನು ಉಂಟು ಮಾಡಬಾರದು. ರಾತ್ರಿ ಕೆಲಸ ಮಾಡುವುದು ಕಳ್ಳರು. ರಾತ್ರಿ ಯಾಕೆ ಬಸ್ ನಿಲ್ದಾಣದ ಕೆಲಸ ಮಾಡಬೇಕು.ಬಸ್ ನಿಲ್ದಾಣಕ್ಕೆ ಹೆಸರು ಇಡಲು ಸಹ ಕಾನೂನಿದೆ. ರಾತ್ರೋರಾತ್ರಿ ಹೇಗೆ ಹೆಸರಿಟ್ಟರು. ಈ ವಿಚಾರದಲ್ಲಿ ಎಲ್ಲ ಕಾನೂನು ಉಲ್ಲಂಘನೆಯಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶ ಮಾಡಿ ನೋಟಿಸ್ ಜಾರಿಗೊಳಿಸಿದೆ. ಅವರೇ ಅನಧಿಕೃತ ಕಟ್ಟಡವೆಂದು ಹೇಳಿದ್ದಾರೆ. ಅವರು ತೆರವು ಮಾಡಬಹುದು. ಮೂಲ ವಿನ್ಯಾಸದಲ್ಲಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟ ಗಡುವು ಮುಗಿದ ಮೇಲೆ ಏನಾಗುತ್ತದೆಯೋ ನೋಡೋಣ ಎಂದು ಹೇಳಿದರು. ಗುಂಬಜ್ ಬಗ್ಗೆ ಪರಿಶೀಲನೆ ನಡೆಸಲು ಹೊಸ ತಜ್ಞರ ಸಮಿತಿಯ ಅವಶ್ಯಕತೆ ಇಲ್ಲ. ಕೆಆರ್‌ಐಡಿಲ್‌ನ ತಜ್ಞರೇ ಮೂಲ ನಕ್ಷೆಗೆ ಅನುಮತಿ ಕೊಟ್ಟಿದ್ದಾರೆ.ಹೀಗಾಗಿ,ಗುಂಬಜ್‌ನ ಮಾದರಿಯ ಗೋಪುರವನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ

ಮೈಸೂರಿಗೆ ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಖಾರವಾಗಿ ಟಾಂಗ್ ಕೊಟ್ಟರು. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ.ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾಯಿಸುತ್ತೇನೆಂದು ಹೇಳಿದ್ದೆ. ಅದರಂತೆ ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ನನ್ನ ಮಾತಿಗೆ ಬದ್ಧ. ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ತೆರವು ಮಾಡಲೇಬೇಕು ಎಂದರು. ನಗರದ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೇ ಹೊರತು ಅವರ ಶತ್ರುಗಳ ಹೆಸರು ಹೇಳಬಾರದು. ಮಹಾರಾಜರ ಆಡಳಿತದ ಅಭಿವೃದ್ಧಿಗಳನ್ನು ಹೇಳುವುದು ನ್ಯಾಯ ಸಮ್ಮತ ಎಂದರು.
ಈ ನಡುವೆ ಇಬ್ಬರು ನಾಯಕರ ಒಳಜಗಳದ ಬಗ್ಗೆ ಪಕ್ಷದ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದು, ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೂಚಿಸಿದ್ದಾರೆ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ