ಹನೂರು: ಲಂಬಾಣಿ ಸಮುದಾಯಕ್ಕೆ ಸರ್ಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಮಾರಾಟ ಮಾಡಿ ಲಕ್ಷಾಂತರ ರೂ.ಗಳನ್ನು ದೋಖ ಮಾಡಿರುವ ಸಮಾಜ ಸೇವಕ ನಿಶಾಂತ್ ಬೆಂಬಲಿಗರು ಸಮುದಾಯದವರನ್ನು ಕಿಡಿಗೇಡಿಗಳು ಎಂದು ಹೇಳಿರುವುದು ಖಂಡನೀಯ ಎಂದು ದಿನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರುಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಹನೂರು ಕ್ಷೇತ್ರದಲ್ಲಿ ಲಂಬಾಣಿ ಸಮುದಾಯ ಸೇರಿದಂತೆ ನೂರಾರು ಸಮಾಜದವರು ಹಿಂದುಳಿದಿದ್ದಾರೆ. ಆದರೆ ನಿಶಾಂತ್ ಮತ್ತು ಅವರ ಬೆಂಬಲಿಗರು ಕೇವಲ ಲಂಬಾಣಿ ಸಮುದಾಯದವರನ್ನು ಟಾರ್ಗೆಟ್ ಮಾಡಿ 30, 60 ರೂ.ಗಳ ಸೀರೆ ರವಿಕೆ ಹಾಗೂ ಬಾಡೂಟದ ಆಮಿಷ ಒಡ್ಡುತ್ತಿದ್ದಾರೆ. ಸಮಾಜಸೇವೆ ಮಾಡುವುದಾದರೆ, ಎಲ್ಲಾ ಸಮುದಾಯದವರನ್ನು ಪರಿಗಣನೆಗೆ ತೆಗೆದುಕೊಂಡು ಮಾಡಲಿ ಅದು ಬಿಟ್ಟು ಒಂದೇ ಸಮುದಾಯಕ್ಕೆ ಸೇವೆ ಮಾಡುವ ಷಡ್ಯಂತ್ರ ಏನಿರಬಹುದು ಎಂದು ಪ್ರಶ್ನಿಸಿದ ಅವರು ಸಮುದಾಯದ ಜನತೆಗೆ ಜಮೀನು ನೀಡುತ್ತೇವೆ ಎಂದು 3.50 ಲಕ್ಷ ರೂ.ಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪಿಸಿದರು. ಮೋಸ ಮಾಡಿ ಹಣ ಪಡೆದಿರುವ ಇವರು ಇಂದಿನ ಮಾರುಕಟ್ಟೆ ದರಕ್ಕೆ ಬೆಲೆ ತೆತ್ತಬೇಕು. ಈ ಬಗ್ಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಲಂಬಾಣಿ ಸಮುದಾಯದ ಮುಖಂಡರುಗಳ ಬೆಂಬಲ ಹಾಗೂ ಮಾರ್ಗದರ್ಶನದಂತೆ ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉದ್ಯಮಿ ನಿಶಾಂತ್ ರವರೇ ನಿಮ್ಮ ಹಿಂದೆ ಇರುವ ಕಣ್ಣಪ್ಪ, ರವೀಂದ್ರ ಅವರ ಹಿನ್ನೆಲೆಯನ್ನು ಒಮ್ಮೆ ತಿಳಿದುಕೊಳ್ಳಿ ತಮ್ಮ ಸ್ವಹಿತಾಸಕ್ತಿಗಾಗಿ ಎಂಥ ಘನಂದಾರಿ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಅವರು ಲೂಟಿಕೋರರು. ಇಂದು ಕೂಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ವಾಸವಾಗಿರುವ ಲಂಬಾಣಿ ಜನತೆಗೆ ಸೀರೆ ರವಿಕೆಯನ್ನು ಹಂಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಅದರಲ್ಲಿ ಲಂಬಾಣಿ ಸಮುದಾಯ ಹೊರತುಪಡಿಸಿ ಬೇರೆ ಸಮುದಾಯದವರಿಗೆ ನೀಡದೇ ವಾಪಸ್ ಕಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇನಾ ಸಮಾಜಸೇವೆ. ಅದು ಕ್ಷೇತ್ರದ ಜನತೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅಂತ ಸಮಾಜ ಸೇವೆ ಮಾಡುವುದಾದರೆ ನಿಮ್ಮ ಊರಿನಲ್ಲಿ ಮಾಡಿ. ಸಾವಿರಾರು ಕೋಟಿ ಒಡೆಯ ಎಂದು ಬಿಂಬಿಸಿಕೊಳ್ಳುತ್ತಿದ್ದಿರಿ ನೀವು ಸರ್ಕಾರಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಿದ್ದೀರಾ, ಸರ್ಕಾರಕ್ಕೆ ಇಂಥವರ ಮೇಲೆ ಐಟಿ ರೈಡ್ ಮಾಡಲು ಕಾಣುವುದಿಲ್ಲವೇ. ಸೀರೆ ರವಿಕೆ ಬಾಡೂಟ ಹಂಚುವ ಬಗ್ಗೆ ಹಿಂದೆ ತಹಸಿಲ್ದಾರ್, ಪೊಲೀಸರು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ರವೀಂದ್ರ ಹಾಗೂ ಮುಖಂಡ ಕಣ್ಣಪ್ಪ ರವರುಗಳು ಬೇರೆ ಸಮುದಾಯದವರಿಗೆ ಮೋಸ ವಂಚನೆ ಮಾಡಿದ್ದರೆ ಸರಿಯಾದ ದಾಖಲೆ ಕೊಡಿ ನಾನು ಹೋರಾಟ ಮಾಡಲು ಸದಾ ಸಿದ್ಧನಿದ್ದೇನೆ ನಾನು ನಮ್ಮ ಸಮಾಜದ ಜತೆಗೆ ಇತರರಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.





