ವರದಿ : ನವೀನ್ ಡಿಸೋಜ, ಮಡಿಕೇರಿ
ಮಡಿಕೇರಿ: ಚಲಿಸುತ್ತಿದ್ದ ಕಾರಿನಲ್ಲಿ ಪುಂಡಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಯುವಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ-ಸುಳ್ಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಘಟನೆ ನಡೆದಿದ್ದು, ಕಾರಿನ ಹೊರಗಡೆ ನೇತಾಡುತ್ತಿದ್ದ ಆರು ಮಂದಿ ಯುವಕರಿಗೆ ಈಗ ಬಿಗ್ ಶಾಕ್ ಎದುರಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ ನೇತಾಡಿ ಡಿಜೆ ಸಾಂಗ್‌ಗೆ ಡ್ಯಾನ್ಸ್ ಮಾಡುತ್ತಲೇ ಹೋಗುತ್ತಿದ್ದ ಆರು ಮಂದಿ ಯುವಕರ ಪುಂಡಾಟವನ್ನು ಹಿಂದೆ ಬರುತ್ತಿದ್ದ ಕಾರು ಚಾಲಕ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಮಡಿಕೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಇದಾಗಿದ್ದು, ಪುಂಡಾಟ ಮೆರೆದಿದ್ದ ಯುವಕರು ಈಗ ಕಂಬಿ ಎಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.





