ಸೋಮವಾರಪೇಟೆ : ಅಸ್ಸಾಂ ಮೂಲದ ಕಾರ್ಮಿಕನೋರ್ವ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದು ಪೊಲೀಸ್ ಅತಿಥಿಯಾಗಿರುವ ಘಟನೆ ಕಾರೇಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.
ಅಸ್ಸಾಂ ರಾಜ್ಯದ ಗೋಲ್‌ಪರಾ ಜಿಲ್ಲೆಯ ಕಿಸ್ನಾಹ್ ಗ್ರಾಮದ ಸೈದುಲ್ಲ(೨೮) ಆರೋಪಿಯಾಗಿದ್ದು, ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ ವಿಚಾರಣೆ ಕೈಗೊಂಡಿದ್ದಾರೆ.
ಮಹಿಳೆಯೊಬ್ಬರು ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಲು ಕಾರೇಕೊಪ್ಪ ಬಸ್ ಸೆಲ್ಟರ್‌ನ ಪಕ್ಕದ ಮೋರಿ ಮೇಲೆ ಕುಳಿತಿದ್ದಾಗ ಆರೋಪಿ, ಮಹಿಳೆಯ ಬಾಯಿ ಮುಚ್ಚಿ, ತಲೆಕೂದಲನ್ನು ಹಿಡಿದು ಎಳೆದು, ಮಹಿಳೆಯನ್ನು ಮೋರಿಗೆ ತಳ್ಳಿ, ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ಸ್ಥಳೀಯರೇ ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಉಪನಿರೀಕ್ಷಕ ಎಂ.ಎ.ಗೋಪಾಲ್ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.





