ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು, ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಕೊಡಗು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 775 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 260.71 ಮಿ.ಮೀ ಮಳೆಯಾಗಿತ್ತು.
ಮಳೆ ಹಾಗೂ ಕೃಷಿ ಚಟುವಟಿಕೆ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯವು 77 ಹೆಕ್ಟೇರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಹಾಗೆಯೇ ಭತ್ತ ಸಸಿಮಡಿ ಕಾರ್ಯ ಆರಂಭವಾಗಿದೆ ಎಂದು ಹೇಳಿದ್ದಾರೆ.
ಮೇ ತಿಂಗಳಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ, ಜೂನ್‌ನಲ್ಲಿ ಸುರಿದ ನೈರುತ್ಯ ಮುಂಗಾರು ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಭತ್ತದ ಸಸಿಮಡಿ ಕಾರ್ಯವು ಪ್ರಗತಿಯಲ್ಲಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಇನ್ನೂ ಕೊಡಗು ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಭತ್ತ, ಮುಸುಕಿನಜೋಳವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಮುಸುಕಿನ ಜೋಳ ಬಿತ್ತನೆ ಕಾರ್ಯವು ಪ್ರಾರಂಭಗೊಂಡಿದ್ದು, ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನು ಮಾಡಲಾಗಿದೆ.





