Mysore
20
overcast clouds
Light
Dark

ವಿರಾಜಪೇಟೆ| ಕರಡ ಮುಖ್ಯ ರಸ್ತೆ ಕುಸಿತ, ಬದಲಿ ರಸ್ತೆಗಾಗಿ ಗ್ರಾಮಸ್ಥರ ಪ್ರತಿಭಟನೆ

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡ ಮುಖ್ಯರಸ್ತೆಯ ತೆರಮೆ ಮೊಟ್ಟೆಯ ತೋರ ಸಮೀಪ  400 ಮೀಟರ್ ರಸ್ತೆ ಕುಸಿದಿದ್ದು, ಜಿಲ್ಲಾಧಿಕಾರಿಗಳು ಮುಂಜಾಗ್ರತೆಗಾಗಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಆದರೆ, ಗ್ರಾಮಸ್ಥರಿಗೆ ಯಾವುದೇ ಬದಲಿ ಮಾರ್ಗ ಗುರುತಿಸದೆ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ತೆರಮೆ ಮೊಟ್ಟೆಯ ಗ್ರಾಮಸ್ಥರು ಇಂದು ಬದಲಿ ರಸ್ತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಜುಲೈ 5 ರಿಂದ ಮುಂದಿನ ಸಪ್ಟೆಂಬರ್ 9 ರವರೆಗೆ ರಸ್ತೆ ಸಂಚಾರ ನಿರ್ಬಂಧಿಸಿ ವಾಹನಗಳು ಬದಲಿ ಮಾರ್ಗದ ಮುಖಾಂತರ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ಯಾವುದೇ ಸಮರ್ಪಕ ರಸ್ತೆ ಗುರುತಿಸಿಲ್ಲ. ಸ್ಥಳೀಯರಿಗೆ ಸಮೀಪದಲ್ಲಿ ಹಾದು ಹೋಗುವ ಬದಲಿ ರಸ್ತೆಯನ್ನು ವ್ಯವಸ್ಥೆ ಮಾಡಿಕೊಡಬೇಕು. ದಿನನಿತ್ಯ ವಿದ್ಯುತ್ ಕಡಿತ ಹಾಗು ಮೊಬೈಲ್ ನೆಟ್ವರ್ಕ್ ಇಲ್ಲ, ಓಡಾಡಲು ರಸ್ತೆ ವ್ಯವಸ್ಥೆ ಕೂಡ ಇಲ್ಲ ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗ್ತಿದೆ. ರಸ್ತೆ ಕುಸಿದು 15 ದಿನಗಳ ಆದರೂ ಬದಲಿ ರಸ್ತೆಯನ್ನು ವ್ಯವಸ್ಥೆ ಮಾಡದ ಆಡಳಿತ ವ್ಯವಸ್ಥೆಯ ಕೈಕಟ್ಟಿ ಕುಳಿತಿದೆ ಎಂದು ಪ್ರತಿಭಟನಾಕಾರರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಶೀಘ್ರದಲ್ಲಿ ಬದಲಿ ರಸ್ತೆ ವ್ಯವಸ್ಥೆ ಮಾಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು. ರಸ್ತೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಸಂಚಾರ ಬಂದ್ ಮಾಡಿ ಹೋದ ಅಧಿಕಾರಿಗಳ ಅಡ್ರೆಸ್ಸೆ ಇಲ್ಲದಾಗಿದೆ. ನಮಗೆ ಓಡಾಡಲು ರಸ್ತೆ ಮಾಡಿಕೊಡಬೇಕು ಎಂದು ಕೆಧಮಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ ಪರಮೇಶ್ವರ  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೆದಮುಳ್ಳೂರು ತೆರಮೆ ಮೊಟ್ಟೆ, ಬಾರಿಕಾಡು ಮೂರು ರಸ್ತೆ, ಪಾಲಂಗಲಾ ನಿವಾಸಿಗಳು  ಗ್ರಾಮದ  ನಿವಾಸಿಗಳು ಇದ್ದರು.