ವರದಿ: ನವೀನ್ ಡಿಸೋಜ
ಕುಶಾಲನಗರ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಹಾಗೂ ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಬಳಿ ಮೃತ ವಿನಯ್ ಮೃತದೇಹ ಇರಿಸಲಾಗಿದೆ. ಇಬ್ಬರು ಶಾಸಕರ ವಿರುದ್ಧ ಪ್ರಕರಣ ದಾಖಲಿಸದ ಹೊರತು ಶವಸಂಸ್ಕಾರ ನಡೆಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿಯಲಾಗಿದೆ.
ಬಿಜೆಪಿ ಬ್ರಹತ್ ಪ್ರತಿಭಟನೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಸರ್ಪಗಾವಲು ಕಂಡುಬಂದಿದೆ. ದಕ್ಷಿಣ ವಲಯ ಡಿ. ಐ. ಜಿ. ಬೋರಲಿಂಗಯ್ಯ ನೇತೃತ್ವದಲ್ಲಿ ಮೈಸೂರು ಎಸ್ ಪಿ. ವಿಷ್ಣುವರ್ಧನ್, ಹಾಸನ ಎಸ್. ಪಿ.ಸುಜಿತಾ ಸಲ್ಮಾನ್, ಮೈಸೂರು ಕ್ರೈಂ ಡಿಸಿಪಿ ಸುಂದರ ರಾಜ್, ಹಾಸನ, ಮಂಡ್ಯ ಹೆಚ್ಚುವರಿ ಎಸ್.ಪಿ ಒಳಗೊಂಡಂತೆ 400 ಪೊಲೀಸರು, 5 ಕೆ.ಎಸ್.ಆರ್.ಪಿ ತುಕಡಿ, 4 ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ ನಿಯೋಜಿಸಲಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮ ರಾಜನ್ ಮಾಹಿತಿ ನೀಡಿದ್ದಾರೆ.





