Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಥೈಲ್ಯಾಂಡ್ ದೇಶದಿಂದ ಕೊಡಗಿಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಖದೀಮರ ಬಂಧನ

ಮಡಿಕೇರಿ: ಥೈಲ್ಯಾಂಡ್ ದೇಶದ ಬ್ಯಾಕಾಂಕ್‌ನಿಂದ ಕೊಡಗು ಸೇರಿದಂತೆ ವಿವಿಧೆಡೆಗೆ ಹೈಡ್ರೋ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಕೊಡಗು ಜಿಲ್ಲಾ ಪೊಲೀಸರು, ಸುಮಾರು 3 ಕೋಟಿ ಬೆಲೆಬಾಳುವ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಕಣ್ಣೂರಿನ ಕಲ್ಲಿಲ್ತಾಯ ಗ್ರಾಮದ ರಿಯಾಜ್, ಕಾಸರಗೋಡುವಿನ ಮೆಹರೂಫ್, ಗುಂಡಿಗೆರೆ ಹೆಗ್ಗಳ ಗ್ರಾಮ ನಾಸಿರುದ್ದೀನ್ ಎಂ.ಯು, ಎಡಪಾಲ ಗ್ರಾಮದ ಯಾಹ್ಯಾ ಸಿ.ಹೆಚ್, ಕುಂಜಿಲ ಗ್ರಾಮದ ಅಕನಾಸ್, ಬೆಟೋಳಿ ಗ್ರಾಮದ ವಾಜೀದ್, ಆರ್ಜಿ ಗ್ರಾಮದ ರವೂಫ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಕೆ. ರಾಮರಾಜನ್ ಅವರು, ಇದೊಂದು ಅಪರೂಪದ ಪ್ರಕರಣವಾಗಿದ್ದು, ಹೈಡೋ ಗಾಂಜಾ ಎಂಬುವುದು ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ನಶೆಯನ್ನು ಕೊಡುವ ಮಾದಕ ದ್ರವ್ಯ ಹಾಗೂ ದುಬಾರಿ ಬೆಲೆಯದ್ದಾಗಿರುತ್ತದೆ. ಹೈಡೋ ಗಾಂಜಾವನ್ನು ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹಾಗೂ ಹವಾ ನಿಯಂತ್ರಿತ ಕೊಠಡಿಯಲ್ಲಿ ನೀರಿನಿಂದ ಬೆಳೆಯಲಾಗುತ್ತದೆ. ಈ ಪ್ರಕರಣವನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ. ಸುಂದರರಾಜ್ ಕೆ.ಎಸ್.ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ. ರವರ ನೇತೃತ್ವದ ತಂಡ ಸತತ 72 ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕಾಕ್‌ನಿಂದ ಹೈಡೋ ಗಾಂಜಾವನ್ನು ಯಾಹ್ಯಾ ಎಂಬುವನು ಸೆಪ್ಟೆಂಬರ್.23ರಂದು ರಾತ್ರಿ 11.30 ಗಂಟೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದಿದ್ದ. ನಂತರ ನಾಸೀರುದ್ದೀನ್, ಆಕನಾಸ್, ಅಜ್ಜಲ್, ರಿಯಾಜ್ ಮತ್ತು ವಾಜೀದ್ ರವರು ಯಾಹ್ಯಾನೊಂದಿಗೆ ಸೇರಿ ಕಾರಿನಲ್ಲಿ ಜೊತೆಯಾಗಿದ್ದರು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಯಾಹ್ಯಾನನ್ನು ಕರೆದುಕೊಂಡು ಕೊಡಗು ಜಿಲ್ಲೆಗೆ ಆಗಮಿಸಿ ಗೋಣಿಕೊಪ್ಪ ಬೆಳ್ಳಿಯಪ್ಪ ರೆಸಿಡೆನ್ಸಿಯಲ್ಲಿ ಈ ತಂಡ ತಂಗಿತ್ತು ಎಂದು ಮಾಹಿತಿ ನೀಡಿದರು.

ಕೇರಳದ ಮೆಹರೂಫ್‌ನ ಮುಂದಿನ ನಿರ್ದೇಶನಕ್ಕಾಗಿ ಈ ತಂಡ ಗೋಣಿಕೊಪ್ಪದಲ್ಲಿ ಕಾಯುತ್ತಿತ್ತು. ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎಂದು ತಿಳಿದ ತಂಡ ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಮಾಡುವ ಉದ್ದೇಶದಿಂದ ವಿರಾಜಪೇಟೆಯಿಂದ ಮಡಿಕೇರಿಗೆ ಬರುತ್ತಿದ್ದರು. ಈ ಬಗ್ಗೆ ಕೊಡಗು ಪೊಲೀಸ್ ಇಲಾಖೆಯ ಡಿ.ಸಿ.ಆರ್.ಬಿ ಘಟಕದ ಪೊಲೀಸ್ ನಿರೀಕ್ಷಕ ಮೇದಪ್ಪ ಮತ್ತು ತಂಡದ ಸದಸ್ಯರಾದ ಯೋಗೇಶ್, ನಿರಂಜನ್, ಶರತ್ ರೈರವರಿಗೆ ಬಂದಂತಹ ಖಚಿತ ಮಾಹಿತಿ ಮೇರೆಗೆ ಮಾಹಿತಿಯನ್ನು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್‌ರವರಿಗೆ ತಿಳಿಸಿದ್ದರು ಎಂದು ಎಸ್‌ಪಿ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಹೇಶ್ ಕುಮಾರ್ ಸೂಚನೆಯಂತೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಲೋಕೇಶ್, ಡಿಸಿಆರ್‌ಬಿ ಘಟಕದ ಸದಸ್ಯರಾದ ಯೋಗೇಶ್, ನಿರಂಜನ್, ರವಿಕುಮಾರ್, ಮುರುಳಿ, ಶರತ್ ರೈ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ವಿರಾಜಪೇಟೆ ರಸ್ತೆಯಲ್ಲಿರುವ ರಮ್ಯ ಸರ್ವಿಸ್ ಸ್ಟೇಷನ್ ಬಳಿಯಲ್ಲಿ ಸೆಪ್ಟೆಂಬರ್.‌28ರಂದು ಸಮಯ ಬೆಳಗಿನ ಜಾವ ೦೧-೦೦ ಗಂಟೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಇವರನ್ನು ವಶಕ್ಕೆ ಪಡೆದು ಬಂಧಿಸಿ ಅವರ ಬಳಿಯಿದ್ದ ಸುಮಾರು 3 ಕೋಟಿ ಬೆಲೆ ಬಾಳುವ 3 ಕೆ.ಜಿ. 31 ಗ್ರಾಂ ತೂಕದ ಹೈಡೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಕೃತ್ಯಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿ ಆರ್ಜಿ ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದ ರವೂಫ್‌ನನ್ನು ಸೆ.28ರಂದು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ನಿರಂಜನ್, ಪ್ರದೀಪ್ ಕುಮಾರ್, ಮುರುಳಿ ಮತ್ತು ನವೀನ್ ರವರ ತಂಡ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ ಮತ್ತು ಪ್ರವೀಣ್ ಕುಮಾರ್ ತಾಂತ್ರಿಕ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಸೆಪ್ಟೆಂಬರ್‌.29ರಂದು ರಂದು ರಾತ್ರಿ 10.30 ಗಂಟೆಗೆ ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಕಾಸರಗೋಡುವಿನ ಮೆಹರೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್‌ಗೆ ಪರಾರಿಯಾಗಲು ಯತ್ನಿಸುತ್ತಿರುವಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್ ಸಕ್ಷೇನಾ ಮತ್ತು ಕೊಚ್ಚೀನ್ ಏರ್ ಪೋರ್ಟ್ ಇಮಿಗ್ರೇಶನ್ ಅಧಿಕಾರಿ ಕೃಷ್ಣರಾಜ್‌ರವರ ಸಹಕಾರದಿಂದ ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿಗಳಾದ ಯೋಗೇಶ್, ಪ್ರಭಾಕರ್, ರಾಜೇಶ್ ರವರ ತಂಡ ಕೊಚ್ಚೀನ್ ಏರ್ ಪೋರ್ಟ್‌ನಲ್ಲಿ ಬಂಧಿಸಿದ್ದಾರೆ ಎಂದರು.

ಅಪರೂಪದ ಪ್ರಕರಣದ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಎಸ್‌ಪಿ ಕೆ. ರಾಮರಾಜನ್, ಯುವಕ ಯುವತಿಯರು ಮಾದಕ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮಾದಕ ವಸ್ತುಗಳ ಸಾಗಾಟದ ಬಗ್ಗೆ ತಿಳಿದಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

 

Tags: