ಕೊಡಗು: ಜಲಪಾತದಲ್ಲಿ ಈಜಲೆಂದು ನೀರಿಗಿಳಿದ ಪ್ರವಾಸಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇಲಾವರ ಜಲಪಾತದಲ್ಲಿ ನಡೆದಿದೆ.
ಕೇರಳ ರಾಜ್ಯದ ಮಟ್ಟನೂರು ನಿವಾಸಿ ರಶೀದ್ (27) ಮೃತ ಯುವಕನಾಗಿದ್ದಾನೆ. ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಮಟ್ಟನೂರಿನಿಂದ ಕೊಡಗಿಗೆ ಪ್ರವಾಸಕ್ಕೆಂದು ಬಂದಿದ್ದು, ಬೆಳಗ್ಗೆ ಚೇಲಾವರ ಜಲಪಾತಕ್ಕೆ ತೆರಳಿದ್ದಾರೆ. ಈ ಸಂದರ್ಭ ರಶೀದ್ ಜಲಪಾತದಲ್ಲಿ ಈಜಲೆಂದು ನೀರಿಗಿಳಿದಿದ್ದು, ಈಜು ಬಾರದ ರಶೀದ್ ನೀರಿನಲ್ಲಿ ಸಿಲುಕಿ ಮುಳುಗಿ ಸಾವನಪ್ಪಿದ್ದಾನೆ.
ಯುವಕ ನೀರಿನಲ್ಲಿ ಮುಳಗುತ್ತಿದ್ದಂತೆ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಲಾಯಿತಾದರೂ, ರಶೀದ್ನನ್ನು ಬದುಕಿಸಲಾಗಲಿಲ್ಲ. ಬಳಿಕ ಸ್ಥಳೀಯ ಈಜುಪಟುಗಳು ಹಾಗೂ ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.