ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಗ್ರಾಮದ ಎವೊಲ್ವ್ ಬ್ಲಾಕ್ ಎಸ್ಟೇಟ್ ಬಳಿ ಭಾನುವಾರ ರಾತ್ರಿ ರಸ್ತೆಯಲ್ಲಿ ಹುಲಿ ಇದ್ದ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಈ ವಿಡಿಯೋ ಅರಣ್ಯ ಇಲಾಖೆಗೆ ಸಿಕ್ಕ ಬಳಿಕ ಸ್ಥಳಕ್ಕೆ ತೆರಳಿ ಹುಲಿ ಕಾಣಿಸಿದ್ದ ಸ್ಥಳ ಪರಿಶೀಲನೆ ನಡೆಸಿ ಖಚಿತ ಪಡಿಸಿದ್ದಾರೆ. ಆದರೆ ಹುಲಿ ಈ ಭಾಗದಿಂದ ಬೇರೆ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗ್ರಾಮದ ಸಾರ್ವಜನಿಕರು ರಾತ್ರಿ ವೇಳೆ ಓಡಾಡುವಾಗ ಜಾಗೃತೆ ವಹಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿ ಪ್ರತ್ಯಕ್ಷ ಹಿನ್ನಲೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೊರಗಡೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.





