ಕೊಡಗು: ಕಳೆದ ಕೆಲ ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ಗೋಣಿಕೊಪ್ಪದ ಬಾಳೆಲೆ ದೇವನೂರು ಭಾಗದ ನಾಗರಹೊಳೆ ಅರಣ್ಯದಂಚಿನಲ್ಲಿ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸತತ ನಾಲ್ಕನೇ ದಿನವು ಕಾರ್ಯಾಚರಣೆ ಮುಂದುವರಿದಿದ್ದು, ಆದರೆ ಹುಲಿ ಮಾತ್ರ ಇದುವರೆಗೂ ಗೋಚರಿಸಿಲ್ಲ.
ಈ ಬಗ್ಗೆ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ನಾವು ಕಾರ್ಯಾಚರಣೆ ಮುಂದುವರಿಸಿದ್ದೇವೆ. ಇದರಿಂದ ಹುಲಿ ಈಗ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಹುಲಿ ಪತ್ತೆಗೆ ಶ್ರೀಮಂಗಲ ಹಾಗೂ ಬಾಳೆಲೆ ಭಾಗದ ಅರಣ್ಯದಂಚಿನಲ್ಲಿ ಕ್ಯಾಮರಾ ಅಳವಡಿಸಿ ಜೊತೆಗೆ ಬೋನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಹುಲಿ ಕಾರ್ಯಾಚರಣೆಗೆ ಸಾಕಾನೆಗಳನ್ನು ಕೂಡ ಬಳಸಿಕೊಳ್ಳಲಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಣ ತೊಟ್ಟಿದ್ದಾರೆ.