ಕೊಡಗು: ಇಂದು ಬೆಳಿಗ್ಗೆ ನಿಟ್ಟೂರು ತಟ್ಟಕೇರಿಯ ಕಾಫಿ ತೋಟದಲ್ಲಿ ರಾಜನ್ ಎಂಬುವವರು ಹುಲಿ ದಾಳಿಗೆ ಒಳಗಾಗಿದ್ದರು ಎಂದು ಹೇಳಲಾದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೊವಯ್ಯ ಅವರು ಅರಣ್ಯ ಇಲಾಖೆಯ ಮೂಲಕ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಮೂರು ಕಾಡು ಬೆಕ್ಕು ಮರಿಗಳು (ಪೆರ್ಪಣ) ಪತ್ತೆಯಾಗಿವೆ. ಗಾಯಗೊಂಡ ಕಾರ್ಮಿಕ ರಾಜನ್ ಅವರ ಪತ್ನಿಯು ಕೂಡ ಕಾಡುಬೆಕ್ಕಿನಿಂದ ದಾಳಿ ಆಗಿರಬಹುದು ಎಂದು ಹೇಳಿದ್ದಾರೆ ಎಂದು ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೂರು ಮರಿ ಕಾಡು ಬೆಕ್ಕುಗಳು ಕಂಡುಬಂದಿರುವುದರಿಂದ ಅವುಗಳ ತಾಯಿ ರಾಜುರವರ ಮೇಲೆ ಎರಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರಿಗಳ ಬಳಿ ತಾಯಿ ಬೆಕ್ಕು ಬರುತ್ತದೆಯೇ ಎಂದು ಕಾದು ಕುಳಿತಿದ್ದಾರೆ. ಇನ್ನು ಗಾಯಾಳು ರಾಜನ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.





