ಮಡಿಕೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನೋರ್ವ ಡಿಪೋ ಸಮೀಪ ನಿರ್ವಾಹಕನಿಗೆ ಕೊಲೆ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡುಹಾರಿಸಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿ ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.
ಮಡಿಕೇರಿ-ಬಿರುನಾಣಿ ರೂಟ್ ಚಾಲಕ ವೇಣುಗೋಪಾಲ್ ಎಂಬಾತ ಮೊಬೈಲ್ ನಲ್ಲಿ ಮಾತನಾಡಿಕೊಂಡೇ ಬಸ್ ಚಾಲನೆ ಮಾಡುತ್ತಿದ್ದುದನ್ನು ಬಸ್ಸಿನಲ್ಲಿದ್ದವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಬಳಿಕ ಈ ವಿಚಾರವಾಗಿ ಕುಪಿತನಾದ ಚಾಲಕ ವೇಣುಗೋಪಾಲ್ ಮಡಿಕೇರಿ ಡಿಪೋದಲ್ಲಿ ನಿರ್ವಾಹಕ ರೂಪೇಶ್ ಜೊತೆ ಕಲಹಕ್ಕಿಳಿದಿದ್ದಾನೆ. ನಂತರ
ಕೋವಿ ತಂದು ನಿರ್ವಾಹಕ ರೂಪೇಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಈ ಹಿನ್ನೆಲೆ ಮಡಿಕೇರಿ ನಗರ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಆರೋಪಿ ವೇಣುಗೋಪಾಲನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.