ಮಡಿಕೇರಿ : ಯುವ ದಸರಾ ಅಂಗವಾಗಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡಿನ ಮೂಲಕ ಮೋಡಿ ಮಾಡಿದ ರ‍್ಯಾಪರ್ ಚಂದನ್ ಶೆಟ್ಟಿ, ಯುವಸಮೂಹವನ್ನು ಕುಣಿದು ಕುಪ್ಪಳಿಸುವಲ್ಲಿ ಯಶಸ್ವಿಯಾದರು.
ಚಂದನ್ ಶೆಟ್ಟಿ ವೇದಿಕೆಗೆ ಆಗಮಿಸುತ್ತಿದ್ದಂತೆ ಬೊಬ್ಬೆ ಹೊಡೆದು ಶಿಳ್ಳೆ, ಚಪ್ಪಾಳೆಗಳ ಮೂಲಕ ಪ್ರೇಕ್ಷಕರು ಸ್ವಾಗತಿಸಿದರು. ಚಂದನ್ ತಮ್ಮ ಎಂದಿನ ಶೈಲಿಯಲ್ಲಿ ಹಾಡಲು ಆರಂಭಿಸುತ್ತಿದ್ದಂತೆ ಯುವಜನತೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಚಂದನ್ ಜೊತೆ ತಾವೂ ಹಾಡು ಹಾಡಿದರಲ್ಲದೆ, ನಿಂತ ಸ್ಥಳಗಳಲ್ಲಿಯೇ ನಲಿದು ಸಂಭ್ರಮಿಸಿದರು. ಯುವತಿಯರೂ ಚಂದನ್ ಹಾಡಿಗೆ ಕುಣಿದು ಕುಪ್ಪಳಿಸಿದರು.
ಇದೇ ಸಂದರ್ಭ ನಡೆದ ನೃತ್ಯ ಸ್ಪರ್ಧೆ ಕೂಡ ಗಮನಸೆಳೆಯಿತು. ಜಿಲ್ಲೆಯ ವಿವಿಧೆಡೆಯ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಿದರು.
ಇದೇ ಸಂದರ್ಭ ತಮ್ಮ ಹಾಡಿನ ನಡುವೆ ಯುವಸಮೂಹದ ಬಳಿ ಹಾಡನ್ನು ಹಾಡಿಸುವ ಪ್ರಯತ್ನವನ್ನು ಚಂದನ್‌ಶೆಟ್ಟಿ ಮಾಡಿದರು. ಪ್ರೇಕ್ಷಕರು ಹಾಡಿದ ಹಾಡನ್ನು ಕೇಳಿ ಖುದ್ದು ಚಂದನ್ ಶೆಟ್ಟಿಯೇ ಅಚ್ಚರಿಗೊಳಗಾದರು. ಪರೀಕ್ಷೆಗಳಲ್ಲಿ ಎಷ್ಟು ಅಂಕ ಬಂದಿದೆ? ಈ ಹಾಡನ್ನು ಉತ್ತರ ಪತ್ರಿಕೆಯಲ್ಲಿ ಬರೆಯಬೇಡಿ ಎಂದು ಹಾಸ್ಯಚಟಾಕಿ ಹಾರಿಸಿ ಪ್ರೇಕ್ಷಕರನ್ನು ನಗೆಕಡಲಿನಲ್ಲಿ ತೇಲಿಸಿದರು. ಒಟ್ಟಾರೆ ಸುಮಾರು 20 ನಿಮಿಷದ ಚಂದನ್‌ಶೆಟ್ಟಿ ಕಾರ್ಯಕ್ರಮವನ್ನು ಯುವ ಸಮೂಹ ಸಂಪೂರ್ಣವಾಗಿ ಎಂಜಾಯ್ ಮಾಡಿದರು.





