Mysore
20
overcast clouds
Light
Dark

ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ಮೈಮರೆಯುವುದು ಬೇಡ: ಬಿ.ವೈ ವಿಜಯೇಂದ್ರ

ಕೊಡಗು/ಮಡಿಕೇರಿ: ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಜಪ್ರಿಯತೆ ಕಡಿಮೆಯಾಗಿಲ್ಲ, ಆಗಂತ ಕೊಡಗಿನ ಕಾರ್ಯಕರ್ತರು ಮೈಮರೆಯುವುದು ಬೇಡ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಸಿದರು.

ನಗರದ ಕ್ರಿಸ್ಟಲ್‌ಕೋರ್ಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯದುವೀರ್‌ ಅವರು ಒಂದು ಜಾತಿಗೆ ಸೀಮಿತವಾಗಿಲ್ಲ, ಅವರು ಎಲ್ಲಾ ವರ್ಗದ ಜನಾಂಗದವರನ್ನು ಜೊತೆಯಲ್ಲಿ ಕೊಂಡ್ಯಯುವವರು ಎಂದರು.

ರಾಜ್ಯದಲ್ಲಿ ಬರಗಾಲವಿದ್ದರೂ ಜನರಿಗೆ ನೆರವು ನೀಡದ ಸರ್ಕಾರ ಅಧಿಕಾರದಲ್ಲಿದೆ. ನಮ್ಮೆಲ್ಲರ ತಪ್ಪಿನಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಪರಿಸ್ಥಿತಿ ಹೇಗೆ ಬದಲಾಗಿದೆ ಎಂದರೆ ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲೂ ಚುನಾವಣೆ ನಡೆದರೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಯೋಗಿ ಆದಿತ್ಯನಾಥ ಅವರು ಮಡಿಕೇರಿ ಭಾಗದಲ್ಲಿ ಹಾಗೂ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ನನಗೆ ತೋರಿದ ಪ್ರೀತಿ, ವಿಶ್ವಾಸ ಯದುವೀರ್‌ಗೂ ತೋರಿ: ಸಂಸದ ಪ್ರತಾಪ್‌ ಸಿಂಹ

ಈ ಹತ್ತು ವರ್ಷ ಕೊಡಗಿನ ಜನ ನನಗೆ ತೋರಿದ ಪ್ರೀತಿ, ವಿಶ್ವಾಸವನ್ನು ಯದುವೀರ್‌ ಅವರಿಗೂ ತೋರಬೇಕು ಎಂದರು. ಗೆಲುವಿನ ಅಂತರ ಒಂದು ಲಕ್ಷಕ್ಕೆ ಒಂದು ಮತವೂ ಕಡಿಮೆಯಾಗದಂತಹ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಸಂಸದರಾಗಿದ್ದ ಸಮಯದಲ್ಲಿ ತಾವು ಮಾಡಿದ ಅಭಿವೃದ್ಧ ಕೆಲಸಗಳನ್ನು ತಿಳಿಸಿದರು. ಜೊತೆಗೆ ನಾನು ಆರಂಭಿಸಿರುವ ಕೆಲಸ ನಿಲ್ಲದೇ ಅದನ್ನು ಯದುವೀರ್‌ ಮುಂದುವರಿಸುತ್ತಾರೆ ಎಂದು ಹೇಳಿದರು. ನಾನು ಸಂಸದನಾಗದೇ ಹೋದರೂ ಕ್ಷೇತ್ರ ಪುನರ್‌ ವಿಂಗಡಣೆ ವೇಳೆ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕೆ ಒತ್ತಾಯಿಸುವೆ ಎಂದು ಪುನರುಚ್ಚರಿಸಿದರು.

ಮೈಸೂರು ಅಭಿವೃದ್ಧಿಯಲ್ಲಿ ಪ್ರತಾಪಸಿಂಹ ಹೆಸರು ಶಾಶ್ವತ: ಯದುವೀರ್‌

ಮೈಸೂರು ಕೊಡಗು ಅಭಿವೃದ್ಧಿಯಲ್ಲಿ ಸಂಸದ ಪ್ರತಾಪ್‌ ಸಿಂಹ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. ಮುಂದೆ ಅವರ ಸಲಹೆ ಸಹಕಾರ ಪಡೆಯುವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ತಿಳಿಸಿದರು.

ಕೊಡಗಿನ ಜನತೆಗೆ ಮೈಸೂರು ದಸರ ಹಾಗೂ ಅರಮನೆಗೆ ಸ್ವಾಗತ. ಮಡಿಕೇರಿ ಮತ್ತು ಮೈಸೂರಿನಲ್ಲಿ ಸಂಸದರ ಕಚೇರಿ ಇರುತ್ತದೆ. ಜೊತೆಗೆ ಇದು ಕಾರ್ಯಕರ್ತರ ಕಚೇರಿಯು ಆಗಿರುತ್ತದೆ. ತಮ್ಮ ಕೆಲಸ ಕಾರ್ಯಗಳಿಗೆ ಇದು ಸಹಕಾರಯಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಸ್.ಎ ರಾಮದಾಸ್‌, ಕೆ.ಜಿ ಬೋಪಯ್ಯ, ಎಂ.ಪಿ ಅಪ್ಪಚ್ಚುರಂಜನ್‌, ಸುಜಾ ಕುಶಾಲಪ್ಪ, ಮೇದಪ್ಪ, ಸುನೀಲ್‌ ಸುಬ್ರಹ್ಮಣ್ಯ, ರಾಬಿನ್‌ ದೇವಯ್ಯ, ಉದಯ್‌ಕುಮಾರ್‌ ಶೆಟ್ಟಿ, ರೀನಾ ಪ್ರಕಾಶ್‌ ಭಾಗವಹಿಸಿದ್ದರು.